ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಬಟ್ಟೆ ಅಂಗಡಿಯ ಎರಡು ಮಳಿಗೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ನಗರದ ಕೆಂಪೇಗೌಡ ರಸ್ತೆ ಮತ್ತು ಮೈಸೂರು ರಸ್ತೆಯ ಗುಡ್ಡದಹಳ್ಳಿಯಲ್ಲಿರುವ ಎರಡು ಮಳಿಗೆಗಳ ಮೇಲೆ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆಯೇ ದಾಳಿ ನಡೆಸಿ, ಶೋಧ ಆರಂಭಿಸಿದ್ದರು.
ಚೆನ್ನೈ ಮೂಲದ ಈ ಕಂಪನಿಯು ತಮಿಳುನಾಡಿನಾದ್ಯಂತ ಹತ್ತಾರು ಮಳಿಗೆಗಳನ್ನು ಹೊಂದಿದೆ. ಆ ಎಲ್ಲ ಮಳಿಗೆಗಳು, ಕಂಪನಿಯ ಮುಖ್ಯಸ್ಥ, ಅವರ ಕುಟುಂಬ, ಆಪ್ತರ ಮನೆ ಹಾಗೂ ಕಚೇರಿಗಳಲ್ಲೂ ಶೋಧ ನಡೆದಿದೆ.
ತಮಿಳುನಾಡಿನ ಪ್ರಾದೇಶಿಕ ಪಕ್ಷವೊಂದಕ್ಕೆ ಈ ಕಂಪನಿಯು ನೀಡಿದ್ದ ದೇಣಿಗೆಯ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದಾಯ ತೆರಿಗೆ ವಂಚನೆ ಮಾಡಿರುವುದು ಮತ್ತು ರಾಜಕೀಯ ಪಕ್ಷಕ್ಕೆ ನೀಡಿದ್ದ ದೇಣಿಗೆಯ ಮೊತ್ತ ತಾಳೆಯಾಗದೇ ಇರುವುದರ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಯಲ್ಲಿಯೂ ದಾಳಿ ಮುಂದುವರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.