ADVERTISEMENT

ಗುತ್ತಿಗೆದಾರರ ಮನೆ ಮೇಲೆ ಆದಾಯ ತೆರಿಗೆ ದಾಳಿ

ದಾವಣಗೆರೆ, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ಆಪ್ತ ಗುತ್ತಿಗೆದಾರರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:00 IST
Last Updated 10 ಏಪ್ರಿಲ್ 2019, 17:00 IST
ಐಟಿ ದಾಳಿ ನಡೆದಿರುವ ಉದಯ ಶಿವಕುಮಾರ ಅವರ ಮನೆ
ಐಟಿ ದಾಳಿ ನಡೆದಿರುವ ಉದಯ ಶಿವಕುಮಾರ ಅವರ ಮನೆ   

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಎಸ್.ಎಸ್. ಮಲ್ಲಿಕಾರ್ಜುನ ಅವರ ಆಪ್ತ, ಗುತ್ತಿಗೆದಾರ ಉದಯ ಶಿವಕುಮಾರ ‌ಅವರ ದಾವಣಗೆರೆ ಮನೆ ಮೇಲೆ ದಾಳಿ ಬುಧವಾರ ಆದಾಯ ತೆರಿಗೆ ತನಿಖಾ ತಂಡ ದಾಳಿ ನಡೆಸಿದೆ.

ವಿದ್ಯಾನಗರ ಬಳಿಯ ಬನಶಂಕರಿ ಬಡಾವಣೆಯಲ್ಲಿ ಇರುವ ಉದಯ ಶಿವಕುಮಾರ ಮನೆಗೆ ಐಟಿ ಜಂಟಿ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರ ಸೂಚನೆಯಂತೆ ದಾವಣಗೆರೆ ತಂಡದ 15 ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಬುಧವಾರ ರಾತ್ರಿ ಮತ್ತು ಗುರುವಾರವೂ ತನಿಖೆ ಮುಂದುವರಿಯಲಿದೆ. ದಾಳಿಯಲ್ಲಿ ಸರ್ವೆ ಮತ್ತು ಸರ್ಚ್‌ ಎಂಬ ಎರಡು ವಿಭಾಗಗಳಿದ್ದು, ಸರ್ವೆ ಒಂದು ದಿನದಲ್ಲಿ ಮುಗಿಯುತ್ತದೆ. ಸರ್ಚ್‌ ಆದರೆ, ದೊಡ್ಡ ಪ್ರಮಾಣದ ತನಿಖೆ ಆಗಿರುತ್ತದೆ. ಆಗ ಹಣ ಪತ್ತೆಯಾದರೆ ವಶಪಡಿಸಿಕೊಳ್ಳುವ ಅಧಿಕಾರವೂ ಇರುತ್ತದೆ ಎಂದು ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಮಲ್ಲಿಕಾರ್ಜುನ ಅವರು ದಾವಣಗೆರೆ ಉಸ್ತುವಾರಿ ಸಚಿವರಾಗಿದ್ದ ವೇಳೆ ನಗರದಲ್ಲಿ ಕೈಗೊಂಡಿದ್ದ ಹಲವು ಕಾಮಗಾರಿಗಳನ್ನು ಉದಯ ಶಿವಕುಮಾರ ಅವರೇ ಗುತ್ತಿಗೆ ಪಡೆದಿದ್ದರು.

ಬೆಳಗಾವಿ ಜಿಲ್ಲೆಯ ವಿವಿಧೆಡೆ ಇರುವ ಉದ್ಯಮಿಗಳು, ಗುತ್ತಿಗೆದಾರರ ನಿವಾಸದ ಮೇಲೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸಂಸದ ಪ್ರಕಾಶ ಹುಕ್ಕೇರಿ ಅವರ ಆಪ್ತರಾದ ಚಿಕ್ಕೋಡಿಯ ಇಂದಿರಾ ನಗರದಲ್ಲಿರುವ ಗುತ್ತಿಗೆದಾರ ಪ್ರಕಾಶ ವಂಟಮುತ್ತೆ ಹಾಗೂ ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರುದ್ರಗೌಡ ಎಸ್.ಪಾಟೀಲ ಅವರ ನಿವಾಸದ ಮೇಲೆ ದಾಳಿ ನಡೆದಿದೆ.

ಶಾಸಕ ರಮೇಶ ಜಾರಕಿಹೊಳಿ ಆಪ್ತ, ಗೋಕಾಕ ತಾಲ್ಲೂಕಿನ ಘಟಪ್ರಭಾದಲ್ಲಿರುವ ಉದ್ಯಮಿ ಜಯಶೀಲ ಶೆಟ್ಟಿ ಅವರ ನಿವಾಸ ಹಾಗೂ ಬಾರ್‌, ಹೋಟೆಲ್‌ಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಗದ ಪತ್ರಗಳು, ಲಾಕರ್‌ಗಳ ಮಾಹಿತಿಯನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ ಖಾತೆಗಳ ವಿವರವನ್ನೂ ಪರಿಶೀಲಿಸುತ್ತಿದ್ದಾರೆ. ಸಂಜೆಯ ನಂತರವೂ ತಪಾಸಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.