ADVERTISEMENT

ಜ್ಯೋತಿಷಿ ಮನೆ ಮೇಲೆ ಐಟಿ ದಾಳಿ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅಸ್ತು

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 16:30 IST
Last Updated 1 ಜನವರಿ 2024, 16:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ದಾಳಿ ವೇಳೆ ವಶಪಡಿಸಿಕೊಂಡ ಮೂಲ ದಾಖಲೆಗಳನ್ನು ಹಿಂದಿರುಗಿಸದೆ ವಿನಾಕಾರಣ ತೊಂದರೆ ಉಂಟು ಮಾಡಿ ತಪ್ಪೆಸಗಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಅರ್ಜಿದಾರರಿಗೆ ಉಂಟಾದ ಹಾನಿ ಅಥವಾ ಪರಿಹಾರವನ್ನು ತಪ್ಪೆಸಗಿದ ಅಧಿಕಾರಿಗಳಿಂದಲೇ ಭರಿಸಬೇಕು‘ ಎಂಬ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.

‘ಆರ್‌.ಟಿ.ನಗರದ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಮನೆಯ ಮೇಲೆ 2013ರಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡ ಮೂಲ ದಾಖಲೆಗಳನ್ನು 10 ವರ್ಷ ಕಳೆದರೂ ಹಿಂದಿರುಗಿಸದೆ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು‘ ಎಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. 

ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ, ಪ್ರಧಾನ ಆಯುಕ್ತ, ಹೆಚ್ಚುವರಿ ಆಯುಕ್ತ ಮತ್ತು ಆದಾಯ ತೆರಿಗೆ ಉಪ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದರು. ‘ಏಕಸದಸ್ಯ ನ್ಯಾಯಪೀಠ ನಮ್ಮ ವಿರುದ್ಧ ಕಟುವಾದ ನಿರ್ದೇಶನ ನೀಡಿದ್ದು, ಈ ಸಂಬಂಧದ ವಿವರಗಳನ್ನು ಆದೇಶದಿಂದ ಅಳಿಸಿ ಹಾಕಬೇಕು’ ಎಂದು ಕೋರಿದ್ದರು.

ADVERTISEMENT

ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಮತ್ತು ಸಿ.ಎಂ.ಪೂಣಚ ಅವರಿದ್ದ ವಿಭಾಗೀಯ ನ್ಯಾಯಪೀಠವು, ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಸಮ್ಮತಿಯ ಮುದ್ರೆ ಒತ್ತಿದೆ. ಸ್ವಾಮೀಜಿ ಪರ ಹೈಕೋರ್ಟ್‌ ವಕೀಲ ಎನ್‌.ಅಜಯ್ ಕುಮಾರ್ ಮತ್ತು ಮೇಲ್ಮನವಿಯಲ್ಲಿ ಶ್ರೀಧರ ಪ್ರಭು ವಾದ ಮಂಡಿಸಿದ್ದರು.

ಪ್ರಕರಣವೇನು?: ರಾಜ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಂದ್ರಶೇಖರ ಸ್ವಾಮೀಜಿ ಮನೆ ಮೇಲೆ 2013ರ ಮೇ 4ರಂದು ದಾಳಿ ನಡೆಸಿ, ಸ್ಥಿರಾಸ್ತಿಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ನಡೆಸಿ ಒಂದು ದಶಕ ಕಳೆದರೂ ಆ ದಾಖಲೆಗಳನ್ನು ಸ್ವಾಮೀಜಿಗೆ ಹಸ್ತಾಂತರ ಮಾಡಿರಲಿಲ್ಲ. ಈ ಸಂಬಂಧ ಸ್ವಾಮೀಜಿ, 2023ರ ಜೂನ್ 28ರಂದು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿ, ‘ನನ್ನಿಂದ ವಶಪಡಿಸಿಕೊಂಡಿರುವ ಮೂಲ ದಾಖಲೆಗಳನ್ನು ಹಿಂದಿರುಗಿಸಲು ಆದಾಯ ತೆರಿಗೆ ಇಲಾಖೆಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಆದಾಯ ತೆರಿಗೆ ಇಲಾಖೆ ಮಹಾ ನಿರ್ದೇಶಕರು, ಪ್ರಧಾನ ಆಯುಕ್ತರು, ಹೆಚ್ಚುವರಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತ್ತು. 2023ರ ಆಗಸ್ಟ್ 30ರಂದು ಅರ್ಜಿ ವಿಚಾರಣೆ ನಡೆಸಿದಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದ್ದರು.

‘2013ರ ಮೇ 4ರಂದು ದಾಳಿ ನಡೆಸಿದ ಸಂದರ್ಭದಲ್ಲಿ ಚಂದ್ರಶೇಖರ ಸ್ವಾಮೀಜಿ ಮನೆಯಿಂದ ವಶಪಡಿಸಿಕೊಂಡ ದಾಖಲೆಗಳನ್ನು ಈಗಾಗಲೇ ಹಿಂದಿರುಗಿಸಲಾಗಿದೆ. ಆದ್ದರಿಂದ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ‘ ಎಂದು ಮೆಮೊದಲ್ಲಿ ತಿಳಿಸಿದ್ದರು. ಈ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಏಕಸದಸ್ಯ ನ್ಯಾಯಪೀಠ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಹಿಂದಿರುಗಿಸಲು ತಾಳಿದ್ದ ವಿಳಂಬ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. 

‘ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಲಮಿತಿ ಕಾಯ್ದೆಯಡಿ ನಿರ್ದಿಷ್ಟ ಸಮಯದವರೆಗೆ ಮಾತ್ರ ತಮ್ಮ ವಶದಲ್ಲಿ ಇರಿಸಿಕೊಳ್ಳಲು ಅವಕಾಶವಿದೆ. ಆದರೆ, ಈ ಪ್ರಕರಣವನ್ನು ಗಮನಿದಾಗ, 2013ರಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು 10 ವರ್ಷ ಕಳೆದರೂ ಹಿಂದಿರುಗಿಸದೆ ಅರ್ಜಿದಾರ ಸ್ವಾಮೀಜಿಗೆ ತೊಂದರೆ ನೀಡಲಾಗಿದೆ. ಈ ಮೂಲಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪ್ಪೆಸಗಿದ್ದಾರೆ‘ ಎಂಬ ಅಭಿಪ್ರಾಯವನ್ನು ದಾಖಲಿಸಿ ಅರ್ಜಿ ವಿಲೇವಾರಿ ಮಾಡಿತ್ತು. ಅಂತೆಯೇ, ‘ಅಧಿಕಾರಿಗಳು ಎಸಗಿದ ತಪ್ಪಿಗೆ ಪರಿಹಾರ ಪಡೆಯಲು ಸ್ವಾಮೀಜಿ ಮುಂದಾದಲ್ಲಿ ಅದಕ್ಕಿರುವ ಎಲ್ಲ ಅವಕಾಶಗಳು ಮುಕ್ತವಾಗಿವೆ‘ ಎಂದು ಸ್ವಾಮೀಜಿಗೆ ನಿರ್ದೇಶಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.