ADVERTISEMENT

ಮತದಾರರಿಗೆ ಆಮಿಷ: ₹58 ಕೋಟಿ ಮೌಲ್ಯದ ವಸ್ತುಗಳ ವಶ

ಅನುಮಾನಾಸ್ಪದವಾಗಿ ಆನ್‌ಲೈನ್‌ ವಹಿವಾಟು ನಡೆಸಿದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 18:56 IST
Last Updated 29 ಮಾರ್ಚ್ 2023, 18:56 IST
ಮನೋಜ್‌ ಕುಮಾರ್‌ ಮೀನಾ
ಮನೋಜ್‌ ಕುಮಾರ್‌ ಮೀನಾ   

ಬೆಂಗಳೂರು: ಮತದಾರರಿಗೆ ಆಮಿಷವೊಡ್ಡಲು ವಿವಿಧೆಡೆ ಸಂಗ್ರಹಿಸಿದ್ದ ನಗದು, ಮದ್ಯ, ಚಿನ್ನ, ಬೆಳ್ಳಿ, ಉಚಿತ ಕೊಡುಗೆಗಳು ಸೇರಿದಂತೆ
₹58 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿನ ಚುನಾವಣಾ ಸಿದ್ಧತೆಗಳ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ, ‘ಪೊಲೀಸ್‌ ಇಲಾಖೆಯೊಂದೇ ₹14 ಕೋಟಿ ನಗದು ಮತ್ತು 530 ಕೆ.ಜಿ. ಡ್ರಗ್ಸ್‌ ಸೇರಿದಂತೆ ₹34.36 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ’ ಎಂದು ತಿಳಿಸಿದರು.

‘ಅಬಕಾರಿ ಇಲಾಖೆಯು ₹10 ಕೋಟಿ ಮೌಲ್ಯದ ಮದ್ಯ ಮತ್ತು ಡ್ರಗ್ಸ್‌, ಆದಾಯ ತೆರಿಗೆ ಇಲಾಖೆಯು ₹1.16 ಕೋಟಿ ಮೌಲ್ಯದ ನಗದು, ವಾಣಿಜ್ಯ ತೆರಿಗೆ ಇಲಾಖೆಯು ₹5 ಕೋಟಿ
ಮೊತ್ತದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಾರ್ಚ್ 9ರಿಂದ 27ರವರೆಗೆ ವಿವಿಧ ಕಾಯ್ದೆಗಳ ಅಡಿಯಲ್ಲಿ 1,985 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಬಕಾರಿ ಕಾಯ್ದೆ ಅಡಿಯಲ್ಲೇ 4,119 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

’ನಗರ ಪ್ರದೇಶದಲ್ಲಿ ಮತದಾನ ಹೆಚ್ಚಿಸುವುದು ಮತ್ತು ಹಣ ಬಲ ನಿಯಂತ್ರಿಸುವುದು ಆಯೋಗಕ್ಕೆ ಇರುವ ಪ್ರಮುಖ ಸವಾಲುಗಳು. ಬೆಂಗಳೂರಿನಲ್ಲೇ 2018ರಲ್ಲಿ 2013ಕ್ಕಿಂತಲೂ ಕಡಿಮೆ ಮತದಾನವಾಗಿತ್ತು. ಈ ಬಾರಿ ಮತದಾನ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡಲು ಆನ್‌ಲೈನ್‌ ಮೂಲಕ ಹಣ ಪಾವತಿಸುವುದನ್ನು ತಡೆಯಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಎನ್‌ಪಿಸಿಐ ಜತೆ ಆಯೋಗವು ಸಂಪರ್ಕದಲ್ಲಿದೆ. ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ’ ಎಂದು ತಿಳಿಸಿದರು.

‘ಹೈದರಾಬಾದ್‌ನ ಎಲೆಕ್ಟ್ರಾನಿಕ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಸಂಸ್ಥೆಯು ಕರ್ನಾಟಕಕ್ಕೆ ಹೊಸ ವಿದ್ಯುನ್ಮಾನ ಯಂತ್ರಗಳನ್ನು ಪೂರೈಸಿದೆ. ಈ ಹೊಸ ಯಂತ್ರಗಳನ್ನು ಮೊದಲ ಬಾರಿ ಬಳಸಲಾಗುತ್ತಿದೆ. ಬೇರೆ ಯಾವುದೇ ರಾಜ್ಯದಲ್ಲಿ ಈ ಯಂತ್ರಗಳನ್ನು ಬಳಸಿಲ್ಲ’ ಎಂದು ಮಾಹಿತಿ ನೀಡಿದರು.

‘ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹೊಸ ಮತದಾರರು ಅರ್ಜಿ ನಮೂನೆ–6 ಅನ್ನು ಭರ್ತಿ ಮಾಡಿ ಏಪ್ರಿಲ್‌ 11ರ ಒಳಗೆ ಸಲ್ಲಿಸಬೇಕು. ವಲಸೆಗಾರರು ಮತದಾನದಿಂದ ತಪ್ಪಿಸಿಕೊಳ್ಳದಂತೆ ಅರಿವು ಮೂಡಿಸುವ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಿಂದ ಹೆಚ್ಚು ಜನ ಬೇರೆ, ಬೇರೆ ಸ್ಥಳಗಳಿಗೆ ತೆರಳುತ್ತಾರೆ. ಹೀಗಾಗಿ, ಈಗಾಗಲೇ ಯಾದಗಿರಿ ಜಿಲ್ಲೆಯಿಂದ ತೆರಳುತ್ತಿರುವವರಿಗೆ ಚುನಾವಣಾ ದಿನ ಬರುವಂಗತೆ ಮನವರಿಕೆ ಮಾಡಲು ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

‘ಮತದಾನದ ದಿನದಂದು ಕರ್ತವ್ಯಕ್ಕೆ ನಿಯೋಜಿಸಲಾಗುವ ಪತ್ರಕರ್ತರಿಗೆ ಇದೇ ಮೊದಲ ಬಾರಿ ಅಂಚೆ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.