
ಜಗದೀಶ್
ಬೆಂಗಳೂರು: ‘ಬಿಜೆಪಿಯ ಎಸ್.ಆರ್. ವಿಶ್ವನಾಥ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಕೀಲ ಜಗದೀಶ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಗುವುದು’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ರೂಲಿಂಗ್ ನೀಡಿದರು.
ವಿಧಾನಸಭೆ ಕಲಾಪದ ಮಧ್ಯೆ ವಿಷಯ ಪ್ರಸ್ತಾಪಿಸಿದ ವಿಶ್ವನಾಥ್, ‘ಜಗದೀಶ್ ಎಂಬ ವ್ಯಕ್ತಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾನೆ. ಈ ಹಿಂದೆಯೂ ಆತ ಹೇಳಿದ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಆತ, ನಾನು ಮುಖ್ಯಮಂತ್ರಿಯಾಗಲು ಏನು ಬೇಕೊ ಅದನ್ನು ಮಾಡುತ್ತಿದ್ದೇನೆ. ನಾನು ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿಕೊಂಡಿದ್ದಾನೆ’ ಎಂದರು.
‘ಶಾಸಕನಾದ ನನಗೆ ಈ ಮನೆಯಲ್ಲಿ (ವಿಧಾನಸಭೆ) ಮಾತನಾಡುವ ಅಧಿಕಾರ ಇದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗುರಿ ಮಾಡಲಾಗುತ್ತಿದೆ. ನನ್ನ ವಿರುದ್ಧ ಕಪ್ಪುಹಣದ ಆರೋಪ ಮಾಡಲಾಗಿದೆ. ಅಲ್ಲಾಳಸಂದ್ರದಲ್ಲಿನ ಧರ್ಮಸ್ಥಳಕ್ಕೆ ಸೇರಿದ ಜಮೀನು ಒಂದನ್ನು ಪರಭಾರೆ ಮಾಡಿಸಿಕೊಟ್ಟಿದ್ದೇನೆ ಎಂದು ಆತ ಟೀಕೆ ಮಾಡಿದ್ದಾನೆ. ನನ್ನ ಹಕ್ಕುಗಳಿಗೆ ಚ್ಯುತಿಯಾಗಿದೆ’ ಎಂದರು.
ಆಗ ಸಭಾಧ್ಯಕ್ಷರು, ‘ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತೇನೆ’ ಎಂದು ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.