ADVERTISEMENT

ಎಲ್ಲಿದೆ ನಿನ್ನ ಖಡ್ಗ, ಬಂದಿದ್ದೀನಿ ಬಾರೋ: ಜಮೀರ್‌ ಸವಾಲು

ಬಳ್ಳಾರಿಯಲ್ಲಿ ಬಂಧನ, ಬಿಡುಗಡೆ l ಸೋಮಶೇಖರ ರೆಡ್ಡಿ ಮನೆಗೆ ಭದ್ರತೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 20:15 IST
Last Updated 13 ಜನವರಿ 2020, 20:15 IST
ಬಳ್ಳಾರಿ ಹೊರವಲಯದಲ್ಲಿ ಸೋಮವಾರ ಶಾಸಕ ಜಮೀರ್‌ ಅಹ್ಮದ್‌ ಅವರನ್ನು ವಶಕ್ಕೆ ಪಡೆದು ವ್ಯಾನ್‌ಗೆ ಹತ್ತಿಸಿದ ಪೊಲೀಸರು
ಬಳ್ಳಾರಿ ಹೊರವಲಯದಲ್ಲಿ ಸೋಮವಾರ ಶಾಸಕ ಜಮೀರ್‌ ಅಹ್ಮದ್‌ ಅವರನ್ನು ವಶಕ್ಕೆ ಪಡೆದು ವ್ಯಾನ್‌ಗೆ ಹತ್ತಿಸಿದ ಪೊಲೀಸರು   

ಬಳ್ಳಾರಿ:‘ಉಫ್ ಅಂದ್ರೆ ಯಾರೋ ಹಾರೋಗ್ತಾರೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದರು. ಖಡ್ಗ ತಂದರೆ ಏನಾಗುತ್ತದೆ ಗೊತ್ತಾ ಎಂದಿದ್ದರು. ಈಗ ಬಂದಿದ್ದೀನಿ ಬಾರೋ. ಎಲ್ಲಿದೆ ನಿನ್ನ ಖಡ್ಗ’ ಎಂದು ಶಾಸಕ ಜಮೀರ್ ಅಹ್ಮದ್ ಸವಾಲು ಹಾಕಿದರು.

ರೆಡ್ಡಿಯವರ ಮನೆ ಮುಂದೆ ಧರಣಿ ನಡೆಸುವ ಉದ್ದೇಶದಿಂದ ನಗರಕ್ಕೆ ಸೋಮವಾರ ಬರಲು ಯತ್ನಿಸಿದ ಅವರನ್ನು ಪೊಲೀಸರು ಹೊರವಲಯದ ಕಂಟ್ರಿ ಕ್ಲಬ್‌ ಬಳಿ ತಡೆದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಂತಿ ಭಂಗ ಮಾಡುವುದು ನಮ್ಮ ಉದ್ದೇಶವಲ್ಲ. ಪೊಲೀಸರೆಂದರೆ ಗೌರವವಿದೆ. ಬಂಧಿಸುವುದಾದರೆ ಬಂಧಿಸಲಿ. ಗೋಲಿಬಾರ್‌ ಆದರೂ ಮಾಡಲಿ’ ಎಂದರು.

ADVERTISEMENT

‘ನಾವೇನೂ ಪಕ್ಷದ ವತಿಯಿಂದ ಬಂದಿಲ್ಲ. ಬರಲು ಪಕ್ಷದ ಅನುಮತಿ ಬೇಕಾಗಿಲ್ಲ. ರೆಡ್ಡಿ ಅವರ ಭಾಷಣಕ್ಕೆ ವಿರೋಧಿಸಲು ಬಂದಿರೋದು’ ಎಂದು ಪ್ರತಿಪಾದಿಸಿದರು.

ಮಾತನಾಡುತ್ತ, ಮುಂದುವರಿಯುತ್ತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಜಮೀರ್‌ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲವೂ ಇರಲಿಲ್ಲ. ನಗರದ ಕೆಲವು ಮುಸ್ಲಿಂ ಬೆಂಬಲಿಗರು, ಬೇರೆ ಊರುಗಳ ಬೆಂಬಲಿಗರಷ್ಟೇ ಇದ್ದರು. ರೆಡ್ಡಿಯವರ ಮನೆಗೆ ಪೊಲೀಸ್‌ ಭದ್ರತೆ
ಒದಗಿಸಲಾಗಿತ್ತು.

ಜ.3ರಂದು ಪ್ರಚೋದನಕಾರಿ ಭಾಷಣ ಮಾಡಿದ್ದ ರೆಡ್ಡಿಮನೆ ಮುಂದೆ ಜ.13ರಂದು ಧರಣಿ ನಡೆಸುವುದಾಗಿ ಜಮೀರ್ ಅಹ್ಮದ್‌, ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು. ಧರಣಿಗೆ ಅವಕಾಶ ನೀಡಬಾರದು ಎಂದು ಶಾಸಕ ಕೆ.ಸಿ.ಕೊಂಡಯ್ಯ ಕೂಡ ಬಹಿರಂಗವಾಗಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.

*****

ಶಾಸಕ ಜಮೀರ್ ಅಹ್ಮದ್ ಅವರು ಬಾರ್ಡರ್‌ಗೆ ಹೋಗಿ ಗಂಡಸ್ತನ ತೋರಿಸಲಿ, ಈ ಹಿಂದೆ ಹೇಳಿದಂತೆ ಭದ್ರತಾ ಸಿಬ್ಬಂದಿಯಾಗಿ ಯಡಿಯೂರಪ್ಪ ಅವರ ಮನೆ ಕಾಯಲಿ

-ಬಸನಗೌಡ ಪಾಟೀಲ ಯತ್ನಾಳ, ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.