ADVERTISEMENT

ಜೈಲಿನಲ್ಲಿ ಜಾಮರ್‌–ವಕೀಲರಿಗೆ ತೊಂದರೆ: ನೋಟಿಸ್‌

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 16:00 IST
Last Updated 11 ನವೆಂಬರ್ 2025, 16:00 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಹೊಸದಾಗಿ ಅಳವಡಿಸಲಾಗಿರುವ 5 ಜಾಮರ್‌ಗಳಿಂದ ಕೊಡಿಯಾಲ ಬೈಲ್‌ನಲ್ಲಿರುವ ಜಿಲ್ಲಾ ಕೋರ್ಟ್ ಸಂಕೀರ್ಣದ ಕಲಾಪಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ, ‘ಕಾರಾಗೃಹ ಹಾಗೂ ನ್ಯಾಯಾಲಯದ ಆವರಣದಲ್ಲಿನ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಕುರಿತು ತಾಂತ್ರಿಕ ವರದಿ ಸಲ್ಲಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ, ಜೈಲು ಅಧೀಕ್ಷಕ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿ ‘ಮಂಗಳೂರು ವಕೀಲರ ಸಂಘ’ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ಆದೇಶಿಸಿದೆ. 

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರ ವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಒಂದು ವಾರ ಕಾಲಾವಕಾಶ ನೀಡಿದೆ.

ADVERTISEMENT

‘ಕಾರಾಗೃಹದ ಆವರಣದೊಳಗಿನ ವಿವಿಧ ಸ್ಥಳಗಳಲ್ಲಿ, ಕಾರಾಗೃಹದಿಂದ ಕೋರ್ಟ್‌ವರೆಗೆ ಮತ್ತು ನ್ಯಾಯಾಲಯದ ವಿವಿಧ ಸ್ಥಳಗಳಲ್ಲಿ ಮೊಬೈಲ್ ಸಿಗ್ನಲ್ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಖಚಿತಪಡಿಸುವ ತಾಂತ್ರಿಕ ವರದಿ ಸಲ್ಲಿಸಬೇಕು. ಜಾಮರ್‌ಗಳಿಂದ ಬರುವ ಜಾಮಿಂಗ್ ಸಿಗ್ನಲ್‌ಗಳು ನ್ಯಾಯಾಲಯದಲ್ಲಿ ಮೊಬೈಲ್ ಸಿಗ್ನಲ್‌ಗಳ ಮೇಲೆ ಏನಾದರೂ ಪ್ರತಿಕೂಲ ಪರಿಣಾಮ ಬೀರುತ್ತವೆಯೇ ಎಂಬ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಬೇಕು’ ಎಂದು ನಿರ್ದೇಶಿಸಿದೆ. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ. ಹೈಕೋರ್ಟ್‌ ವಕೀಲ ವೆಂಕಟೇಶ್‌ ಸೋಮರೆಡ್ಡಿ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.