
ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಅವರು ಪಾದಯಾತ್ರೆ ಮಾಡಿದ್ದು 2010ರ ಜುಲೈನಲ್ಲಿ. ಸಂತೋಷ್ ಲಾಡ್ ಅವರ ಗಣಿ ಪರವಾನಗಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಅಂಥವನನ್ನು ಸಿದ್ದರಾಮಯ್ಯ ಮಂತ್ರಿ ಮಾಡಿದ್ದಾರೆ. ನಿಮಗೆ ನಾಚಿಕೆ ಆಗಬೇಕು’ ಎಂದು ವಿಧಾನಸಭೆಯಲ್ಲಿ ಬಿಜೆಪಿಯ ಜನಾರ್ದನ ರೆಡ್ಡಿ ಹೇಳಿದ ಮಾತು ಕೋಲಾಹಲಕ್ಕೆ ಕಾರಣವಾಯಿತು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ತೆರಳಿದ ನಂತರದ ಘಟನೆಗಳ ಬಗ್ಗೆ ಬುಧವಾರ ನಡೆದ ಕಾವೇರಿದ ಚರ್ಚೆಯ ವೇಳೆಯಲ್ಲಿ, 2011ರ ಪ್ರಕರಣದ ಕಡತವನ್ನು ಓದಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ನಡೆದ ಘಟನೆಯನ್ನು ಪ್ರಸ್ತಾಪಿಸಿದರು.
ಅಂದು ರಾಜ್ಯಪಾಲರು ಭಾಷಣ ಮಾಡುತ್ತಿದ್ದಾಗ, ‘ಇದು ಭ್ರಷ್ಟ ಸರ್ಕಾರ. ದಯಮಾಡಿ ನೀವು ಓದಬೇಡಿ’ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದು ಸುರೇಶ್ ಕುಮಾರ್ ಹೇಳಿದರು. ಅದಕ್ಕೆ ಸಿದ್ದರಾಮಯ್ಯ, ‘ನಾನು ಆ ಮಾತನ್ನು ರಾಜ್ಯ ಸರ್ಕಾರಕ್ಕೆ ಹೇಳಿದ್ದೆ. ರಾಜ್ಯಪಾಲರಿಗೆ ಹೇಳಿದ್ದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದು ಸಮರ್ಥನೆ ನೀಡಿದರು.
‘ಆವತ್ತಿನ ಪರಿಸ್ಥಿತಿಯೇ ಬೇರೆ. ಇವತ್ತಿನ ಪರಿಸ್ಥಿತಿಯೇ ಬೇರೆ. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಪಾದಯಾತ್ರೆ ಮಾಡಿದ್ದೆ. ಗಣಿಗಾರಿಕೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಲೋಕಯುಕ್ತದಿಂದಲೇ ವರದಿ ಕೊಟ್ಟಿದ್ದರು. ಇದೇ ಸದನದಲ್ಲಿ ಆ ವರದಿಯ ಬಗ್ಗೆ ಚರ್ಚೆ ಆಗಿತ್ತು’ ಎಂದೂ ಮುಖ್ಯಮಂತ್ರಿ ಹೇಳಿದರು. ಆಗ ಮಧ್ಯಪ್ರವೇಶಿಸಿದ ರೆಡ್ಡಿ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಸದನದಲ್ಲಿ ಗದ್ದಲ ಉಂಟಾಯಿತು. ಕಲಾಪವನ್ನು ಸಭಾಧ್ಯಕ್ಷ ಯು.ಟಿ. ಖಾದರ್ 10 ನಿಮಿಷ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.