ADVERTISEMENT

ಇ.ಡಿ ಡೀಲ್ ಪ್ರಕರಣ​: ಸಿಸಿಬಿ ಕಚೇರಿಗೆ ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 13:11 IST
Last Updated 10 ನವೆಂಬರ್ 2018, 13:11 IST
   

ಬೆಂಗಳೂರು:ತಮ್ಮ ವಿರುದ್ಧ ದಾಖಲಾದ ಇ.ಡಿ. ಡೀಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಮಾಜಿ ಸಚಿವ ಜನಾರ್ದನ ರೆಡ್ಡಿ ನಗರ ಸಿಸಿಬಿ ಕಚೇರಿಗೆ ಶನಿವಾರ ಮಧ್ಯಾಹ್ನ ಬಂದಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ರೆಡ್ಡಿಗೆ ನೊಟಿಸ್ ನೀಡಿದ್ದರು. ಅದರನ್ವಯ ಪ್ರಕರಣದ ಇನ್ನೊಬ್ಬ ಆರೋಪಿ ಅಲಿಖಾನ್ ಜೊತೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬಂದಿದ್ದಾರೆ. ಸಿಸಿಬಿ ಡಿಸಿಪಿ ಗಿರೀಶ್ ಹಾಗೂ ಎಸಿಪಿ ನೇತೃತ್ವದ ತಂಡ ಗಳು ಜನಾರ್ದನ ರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಿದೆ. ಮುಂಜಾಗ್ರತ ಕ್ರಮವಾಗಿ ಸಿಸಿಬಿ ಕಚೇರಿ ಸುತ್ತಲು ಪೋಲಿಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಎರಡು ಗಂಟೆಯಿಂದ ವಿಚಾರಣೆ
ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಎರಡು ಗಂಟೆಯಿಂದ ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಸಿಸಿಬಿ ಅಲೋಕ್ ಕುಮಾರ ಹಾಗೂ ಡಿಸಿಪಿ ಎಸ್.ಗಿರೀಶ್ ಸಮ್ಮುಖದಲ್ಲಿ ವಿಚಾರಣೆ. ಅಲಿಖಾನ್ ಜೊತೆಯಲ್ಲಿ ರೆಡ್ಡಿ ವಿಚಾರಣೆ ನಡೆಯುತ್ತಿದೆ.

ಪ್ರಕರಣದ ಇನ್ನೊಬ್ಬ ಆರೋಪಿ ಫರೀದನನ್ನು ಕಚೇರಿಗೆ ಕರೆಸಿಕೊಂಡ ಅಧಿಕಾರಿಗಳು, ರೆಡ್ಡಿ ಹಾಗೂ ಅಲಿಖಾನ್ ಎದುರು ನಿಲ್ಲಿಸಿ ವಿಚಾರಣೆ ಮಾಡುತ್ತಿದ್ದಾರೆ. ಮರು ಮಂದಿಗೆ ಪ್ರಶ್ನೆ ಹಾಗೂ ಮರು ಪ್ರಶ್ನೆ ಕೇಳುತ್ತಿದ್ದಾರೆ.

‘ನಾನು ತಲೆಮರೆಸಿಕೊಂಡಿಲ್ಲ'

‘ಇ–ಡಿ ಡೀಲ್’ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆಯೇ ಕಣ್ಮರೆಯಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರು, ತಮ್ಮ ಹೇಳಿಕೆಯನ್ನು ಸೆಲ್ಫಿ ವಿಡಿಯೊದ ಮೂಲಕ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದರು.

‘ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ವಕೀಲರ ಜತೆ ಶನಿವಾರ ಸಂಜೆಯೇ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸುತ್ತೇನೆ’ ಎಂದು ರೆಡ್ಡಿ ಆ ವಿಡಿಯೊದಲ್ಲಿ ಹೇಳಿದ್ದಾರೆ.

‘ಪೊಲೀಸ್ ಕಮಿಷನರ್ ಪತ್ರಿಕಾಗೋಷ್ಠಿಯಲ್ಲಿ ನನ್ನ ಹೆಸರು ಹೇಳುತ್ತಿದ್ದಂತೆಯೇ ವಕೀಲರನ್ನು ಸಂಪರ್ಕಿಸಿದ್ದೆ. ಪೊಲೀಸರು ನನ್ನ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ನಾವು ಸಿಸಿಬಿ ಕಚೇರಿಗೆ ಹೋಗೋಣ ಬನ್ನಿ ಎಂದು ಕರೆದಿದ್ದೆ. ಅದಕ್ಕೆ, ‘ನಮಗೆ ನೋಟಿಸ್‌ ಬಂದಿಲ್ಲ. ಎಫ್‌ಐಆರ್‌ನಲ್ಲೂ ನಿಮ್ಮ ಹೆಸರಿಲ್ಲ. ಯಾವ ಕಾರಣಕ್ಕಾಗಿ ಅವರ ಬಳಿ ಹೋಗಬೇಕು. ಕಾನೂನು ಬದ್ಧವಾಗಿ ನೋಟಿಸ್ ಕೊಟ್ಟರೆ ಮಾತ್ರ ಹೋಗೋಣ’ ಎಂದು ಅವರು ಹೇಳಿದ್ದರಿಂದ ಸುಮ್ಮನಾಗಿದ್ದೆ.

‘ನಾನು ಬೆಂಗಳೂರಿನಲ್ಲೇ ಇದ್ದೇನೆ. ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿಲ್ಲ. ಇಷ್ಟು ದೊಡ್ಡ ನಗರ ಬಿಟ್ಟು ಹೊರಗಡೆ ಹೋಗಬೇಕಾದ ಅವಶ್ಯಕತೆ ಇಲ್ಲ. ಪೊಲೀಸ್ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ಸುಳ್ಳು ಸುದ್ದಿ ಮಾಡಿಸುತ್ತಿದ್ದಾರೆ. ಸದ್ಯ ವಕೀಲರ ಸಲಹೆಗಳನ್ನಷ್ಟೇ ಪಾಲಿಸುತ್ತಿದ್ದೇನೆ.’

‘ನನ್ನ ವಿರುದ್ಧ ಸಣ್ಣ ಆಧಾರವಿದ್ದರೂ ಸಿಸಿಬಿಯವರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿ. ಅದನ್ನು ಬಿಟ್ಟು ಮಾಧ್ಯಮಗಳ ದಿಕ್ಕು ತಪ್ಪಿಸುವುದು ಬೇಡ. ರಾಜಕೀಯ ಷಡ್ಯಂತ್ರಕ್ಕೆ ಒಳಗಾಗದೆ ಇನ್ನಾದರೂ ಪ್ರಾಮಾಣಿಕವಾಗಿ ನಡೆದುಕೊಳ್ಳಲಿ. ಪೊಲೀಸ್ ಮಗನಾದ ನನಗೆ, ಪೊಲೀಸರ ಮೇಲೆ ಅಪಾರವಾದ ಗೌರವವಿದೆ. ನಾನು ತಪ್ಪು ಮಾಡಿಲ್ಲ ಎಂದ ಮೇಲೆ ಆತಂಕ ಏಕೆ ಪಡಬೇಕು.’

‘ರಾಜ್ಯದಲ್ಲಿ ತುಂಬ ಕೆಟ್ಟ ಬೆಳವಣಿಗೆ ನಡೀತಾ ಇದೆ. ಅದು ಜನರಿಗೆ ತಿಳಿಯಬೇಕು. ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಈಗ ಸಿಸಿಬಿ ಕಚೇರಿಗೆ ತೆರಳುತ್ತಿದ್ದೇನೆ’ ಎಂದು ರೆಡ್ಡಿ ವಿಡಿಯೊದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.