ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಸಲ್ಲಿಸಲಾಗಿದ್ದ ರಿಟ್ ಅರ್ಜಿಗಳನ್ನು ಕಲಬುರಗಿ ಪೀಠದಲ್ಲಿನ ನ್ಯಾಯಮೂರ್ತಿ ಎಂ.ಐ.ಅರುಣ್ ಮತ್ತು ಬೆಂಗಳೂರು ಪ್ರಧಾನ ಪೀಠದಲ್ಲಿನ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠಗಳು ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿವೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಅನಿರುದ್ಧ ಎ.ಕುಲಕರ್ಣಿ ವಾದ ಮಂಡಿಸಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ನಿಷೇಧಿಸಿ, ಇನ್ನು ಮುಂದೆ ಈ ಕೇಂದ್ರಗಳ ಹಂಚಿಕೆ ಸ್ಥಗಿತಗೊಳಿಬೇಕು ಎಂದು ರಾಜ್ಯ ಸರ್ಕಾರ 2025ರ ಮೇ 14ರಂದು ಹೊರಡಿಸಿರುವ ಆದೇಶವು ಏಕಪಕ್ಷೀಯವಾಗಿದ್ದು, ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಪ್ರತಿವಾದಿಗಳ ಪರವಾದ ಯಾವುದೇ ಏಜೆಂಟರು, ಸೇವಕರು ಅಥವಾ ಯಾರಾದರೂ ಅವರ ಹೆಸರು ಹೇಳಿಕೊಂಡು ಬಲವಂತದ ಕ್ರಮಕ್ಕೆ ಮುಂದಾಗದಂತೆ ಆದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠಗಳು, ‘ಅರ್ಜಿದಾರರ ಜನೌಷಧಿ ಕೇಂದ್ರಗಳನ್ನು ಪ್ರತಿಬಂಧಿಸಬಾರದು’ ಎಂದು ಆದೇಶಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ವೈದ್ಯಕೀಯ ಹಾಗೂ ಔಷಧೀಯ ಬ್ಯೂರೊ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ?: ‘ಜನೌಷಧ ಕೇಂದ್ರಗಳು ಶೇ 50 ರಿಂದ 90ರವರೆಗೂ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುತ್ತವೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವವರು, ಹಿರಿಯ ನಾಗರಿಕರು, ದಿನಗೂಲಿ ನೌಕರರು, ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರು ಮತ್ತು ನಿತ್ಯವೂ ಔಷಧಗಳ ಅಗತ್ಯ ಹೊಂದಿರುವವರಿಗೆ ಈ ಸೇವೆ ಅತ್ಯಂತ ಸಹಕಾರಿಯಾಗಿದೆ. ಇಂತಹ ಔಷಧ ಮಳಿಗೆಗಳನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆರೋಗ್ಯದ ಹಕ್ಕಿನ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಭಾಲ್ಕಿ ತಾಲ್ಲೂಕಿನ ತುಗಾಂವ್ ಹಲಸಿ ನಿವಾಸಿ ಶ್ರೀಕಾಂತ ಅನಂತಾಚಾರ್ಯ ಜೋಶಿ ಸೇರಿದಂತೆ 16 ಜನೌಷಧಿ ಕೇಂದ್ರಗಳ ಮಾಲೀಕರು (ಕಲಬುರಗಿ) ಹಾಗೂ ಬೆಂಗಳೂರಿನ ಟಿ.ಎನ್.ಪ್ರದೀಪ್, ಶಿರಾಳಕೊಪ್ಪದ ಎಚ್.ಎಂ.ಬಸವರಾಜ್, ಸುಳ್ಯ ತಾಲ್ಲೂಕಿನ ಬೆಳ್ಪ ಗ್ರಾಮದ ಪಿ.ಭಾವಿನ್ ಕುಮಾರ್, ಉಪ್ಪಿನಂಗಡಿಯ ಅನಿಲ್ ಕುಮಾರ್ ಜೈನ್, ಕಡೂರಿನ ಪಿ.ಇ.ಚಂದ್ರಶೇಖರ ಮೂರ್ತಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಪ್ರತ್ಯೇಕ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.