ADVERTISEMENT

8 ತಿಂಗಳು ಕಳೆದರೂ ಪ್ರವೇಶ ಸಿಗದೆ ‘ಒಬಿಸಿ’ ವಿದ್ಯಾರ್ಥಿಗಳ ಪರದಾಟ

ಜವಾಹರ್‌ ನವೋದಯ ವಿದ್ಯಾಲಯ

ಶ್ರೀಕಾಂತ ಕಲ್ಲಮ್ಮನವರ
Published 23 ಡಿಸೆಂಬರ್ 2020, 21:31 IST
Last Updated 23 ಡಿಸೆಂಬರ್ 2020, 21:31 IST

ಹುಬ್ಬಳ್ಳಿ: ಒಬಿಸಿ ಪಟ್ಟಿಯಲ್ಲಿನ ಗೊಂದಲ ಇತ್ಯರ್ಥವಾಗದಿರುವುದರಿಂದ ಕೇಂದ್ರ ಸರ್ಕಾರದ ಜವಾಹರ್‌ ನವೋದಯ ವಿದ್ಯಾಲಯದ ಆರನೇ ತರಗತಿಗೆ ಆಯ್ಕೆಯಾಗಿರುವ ಈ ವರ್ಗದ ವಿದ್ಯಾರ್ಥಿಗಳ ಪ್ರವೇಶ 8 ತಿಂಗಳಿ ನಿಂದಲೂ ಕಗ್ಗಂಟಾಗಿಯೇ ಉಳಿದಿದೆ.

ತರಗತಿಯ ಆನ್‌ಲೈನ್‌ ಪಾಠಗಳು ಆರಂಭವಾಗಿ 2 ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದ್ದು, ಪ್ರವೇಶ ಸಿಗದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಗಳಲ್ಲಿ ಇದುವರೆಗೆ ಎಸ್‌.ಸಿ ವಿದ್ಯಾರ್ಥಿಗಳಿಗೆ ಶೇ 15ರಷ್ಟು, ಎಸ್‌.ಟಿ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಮೀಸಲಾತಿ ಇತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು, ಇತರೆ ಹಿಂದುಳಿದ ಜಾತಿಯ (ಒಬಿಸಿ) ವಿದ್ಯಾರ್ಥಿಗಳಿಗೂ ಮೀಸಲಾತಿ ನೀಡಲು ತೀರ್ಮಾನಿಸಿತು. ಶೇ 27ರಷ್ಟು ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ಲಭಿಸಿತು. ಪ್ರಸಕ್ತ 2020–21ನೇ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೆ ತರಲಾಗಿದೆ.

ADVERTISEMENT

ಜನವರಿಯಲ್ಲಿ ಪರೀಕ್ಷೆ ಬರೆಯಲಾಗಿತ್ತು. ಅಂಕಗಳ ಆಧಾರದ ಮೇಲೆ ಆಯ್ಕೆಯಾದ ವಿದ್ಯಾರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಯಿತು.

ರಾಜ್ಯದ ಒಬಿಸಿ ಪಟ್ಟಿಯಲ್ಲಿರುವ ವೀರಶೈವ ಲಿಂಗಾಯತರು ಮತ್ತು ಉಪಜಾತಿಗಳು, ಬಂಟರು ಹಾಗೂ ವಿವಿಧ ಜಾತಿಗಳ ವಿದ್ಯಾರ್ಥಿಗಳು ಸೇರಿದ್ದರು. ಪ್ರವೇಶ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಇವರ ಪ್ರಮಾಣಪತ್ರವನ್ನು ಪರಿಗಣಿಸುತ್ತಿಲ್ಲ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಈ ಜಾತಿಗಳು ಇಲ್ಲವೆಂದು ಅವರಿಗೆ ಪ್ರವೇಶ ನೀಡಲು ನಿರಾಕರಿಸಿವೆ.

‘ಕೇಂದ್ರ ಹಾಗೂ ರಾಜ್ಯದ ಒಬಿಸಿ ಪಟ್ಟಿಯಲ್ಲಿರುವ ವ್ಯತ್ಯಾಸವನ್ನು ನವೋದಯ ವಿದ್ಯಾಲಯ ಸಮಿತಿಯ (ನವದೆಹಲಿ) ಗಮನಕ್ಕೆ ತಂದಿದ್ದೇವೆ. ಈ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲು ಕಳೆದ ವಾರ ಸೂಚಿಸಿದ್ದು, ಅವರಿಗೂ ಅವಕಾಶ ನೀಡಿದ್ದೇವೆ’ ಎಂದು ನವೋದಯ ವಿದ್ಯಾಲಯದ ಸಿಬ್ಬಂದಿಯೊಬ್ಬರು ‍‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.