ADVERTISEMENT

ಜಯದೇವ ಆಸ್ಪತ್ರೆ: ಡಾ. ಮಂಜುನಾಥ್ ಮುಂದುವರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:22 IST
Last Updated 16 ಜುಲೈ 2022, 19:22 IST
ಡಾ.ಸಿ.ಎನ್. ಮಂಜುನಾಥ್
ಡಾ.ಸಿ.ಎನ್. ಮಂಜುನಾಥ್   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹುದ್ದೆಯಲ್ಲಿ ಡಾ.ಸಿ.ಎನ್. ಮಂಜುನಾಥ್ ಅವರನ್ನೇ ಮುಂದುವರಿಸಬೇಕು ಎಂದು ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಅವರ ಅಧಿಕಾರವಧಿ ಇದೇ 19ಕ್ಕೆ ಅಂತ್ಯವಾಗಲಿದೆ. ಆದ್ದರಿಂದ ಸಂಸ್ಥೆಯ ವೈದ್ಯರು ಹಾಗೂ ಸಿಬ್ಬಂದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.ಅವರನ್ನು ಮುಂದುವರಿಸುವಂತೆ ಆಗ್ರಹಿಸಿ, ಮುಂಬರುವ ಮಂಗಳವಾರ ಬೆಳಿಗ್ಗೆ ಹೊರ ರೋಗಿ ವಿಭಾಗ ಪ್ರಾರಂಭಕ್ಕೂ ಮೊದಲು ಪ್ರತಿಭಟನೆ ನಡೆಸಲು ಸಿಬ್ಬಂದಿ ನಿರ್ಧರಿಸಿದ್ದಾರೆ.

‘ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿನ (ನ್ಯಾಷನಲ್ ಮೆಡಿಕಲ್ ಕೌನ್ಸಿಲ್) ಪ್ರಕಾರ ಯಾವುದೇ ಸಂಸ್ಥೆಯ ಮುಖ್ಯಸ್ಥರು 70 ವರ್ಷಗಳವರೆಗೆ ಸೇವೆ ಸಲ್ಲಿಸಬಹುದು. ಡಾ.ಸಿ.ಎನ್. ಮಂಜುನಾಥ್ ಅವರಿಗೆ 65 ವರ್ಷವಾಗಿದೆ. ಆದ್ದರಿಂದ ಅವರಿಗೆ ಇನ್ನೂ ಕೆಲ ವರ್ಷಗಳವರೆಗೆ ಆಡಳಿತ ನಿರ್ವಹಿಸುವ ನಾಯಕತ್ವ ಗುಣವಿದೆ. ನಿರ್ದೇಶಕ ಸ್ಥಾನದಲ್ಲಿ ಅವರನ್ನೇ ಮುಂದುವರಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ADVERTISEMENT

‘ಮಂಜುನಾಥ್ ಅವರ ಕಾರ್ಯದಕ್ಷತೆ, ದೂರದೃಷ್ಟಿಯಿಂದ ಸಂಸ್ಥೆಯು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. ಸಂಸ್ಥೆಯ ಶಾಖೆಗಳೂ ವಿಸ್ತರಣೆಗೊಂಡಿವೆ. ಅವರ ಸೇವೆಗೆ ‘ಪದ್ಮಶ್ರೀ’ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಅವರ ಪರಿಶ್ರಮದಿಂದ ಭಾರತದ ಪ್ರತಿಷ್ಠಿತ 10 ಹೃದ್ರೋಗ ಆಸ್ಪತ್ರೆಗಳ ಪಟ್ಟಿಯಲ್ಲಿ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.