ADVERTISEMENT

ಜಯದೇವ: 4 ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 19:32 IST
Last Updated 27 ಡಿಸೆಂಬರ್ 2022, 19:32 IST
   

ಬೆಂಗಳೂರು:ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇಥಿಯೋಪಿಯದ ನಾಲ್ವರು ಮಕ್ಕಳಿಗೆ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ನಾಲ್ವರಲ್ಲಿ ಒಂದು ಮಗುವಿನ ಹೃದಯದಲ್ಲಿ ರಂಧ್ರವಿತ್ತು. ಅಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದರಿಂದ ಅವರನ್ನು ಇಲ್ಲಿಗೆ ಕರೆತರಲಾಗಿತ್ತು. 16 ವರ್ಷದ ಟಿಬೆಸಿಲಾಸ್ಸೆ ಕಸ್ಸಾಹುನ್, 6 ವರ್ಷದ ಕೇಜನ್ ಹೈಲ್, 12 ವರ್ಷದ ಮೆಜಿಡಾ ಅಬ್ದು ಹಾಗೂ 13 ವರ್ಷದ ಬಿಲೆನ್ ವರ್ಕಿನೆ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು.

ಇಥಿಯೋಪಿಯದ ರೋಟರಿ ಸಂಸ್ಥೆ, ಬೆಂಗಳೂರಿನ ಅಂತರರಾಷ್ಟ್ರೀಯ ರೋಟರಿ 3190 ಮತ್ತು ನೀಡಿ ಹಾರ್ಟ್ ಫೌಂಡೇಷನ್‌ನ ರಾಜೇಂದ್ರ ರೈ ಅವರು ನಾಲ್ವರ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಸಂಸ್ಥೆಯ ಡಾ.ಪಿ.ಎಸ್. ಸೀತಾರಾಮ ಭಟ್, ಡಾ. ದಿವ್ಯಾ, ಡಾ. ಚಿರಾಗ್, ಡಾ. ಚಂದ್ರಸೇನ ಅವರನ್ನು ಒಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. ನಾಲ್ವರು ಮಕ್ಕಳೂ ಚೇತರಿಸಿಕೊಂಡಿದ್ದಾರೆ.

ADVERTISEMENT

‘ಪ್ರತಿ ಸಾವಿರ ಶಿಶುಗಳಲ್ಲಿ 6ರಿಂದ 7 ಶಿಶುಗಳು ಜನ್ಮಜಾತ ಹೃದಯ ಸಮಸ್ಯೆ ಹೊಂದಿರುತ್ತಾರೆ. ಹೃದಯದಲ್ಲಿ ರಂಧ್ರ ಇರುವವರಿಗೆ ಜ್ವರ, ಕೆಮ್ಮು, ನೆಗಡಿ, ನ್ಯುಮೋನಿಯಾ, ಚರ್ಮ ಮತ್ತು ಉಗುರುಗಳ ಬಣ್ಣ ಬದಲು, ತೂಕ ಕಳೆದುಕೊಳ್ಳುವಿಕೆ ಸೇರಿ ವಿವಿಧ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಹೃದಯದಲ್ಲಿ ರಂಧ್ರ ಇರುವ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸದಿದ್ದರೆ 10 ವರ್ಷದೊಳಗೆ ಮೃತಪಡುವ ಸಾಧ್ಯತೆ ಇರುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.