ADVERTISEMENT

ಜೆಡಿಎಸ್‌ನಿಂದ ಬಿಎಸ್‌ಪಿ ದೂರ

ಎಲ್ಲ 28 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 19:04 IST
Last Updated 8 ಮಾರ್ಚ್ 2019, 19:04 IST
   

ಬೆಂಗಳೂರು: ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ತೀರ್ಮಾನಿಸಿರುವ ಜೆಡಿಎಸ್‌ನಿಂದ ಬಿಎಸ್‌ಪಿ ದೂರ ಸರಿದಿದೆ. ಎಲ್ಲ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಕ್ಷ ತೀರ್ಮಾನಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್‌.ಮಹೇಶ್‌ ಗೆಲುವು ಸಾಧಿಸಿದ್ದರು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅವರನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನಾಗಿ ಮಾಡಲಾಗಿತ್ತು. ಪಕ್ಷದ ವರಿಷ್ಠೆ ಮಾಯಾವತಿ ಸೂಚನೆ ಮೇರೆಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್ ಜತೆಗೂಡಿ ಚುನಾವಣೆ ಎದುರಿಸುತ್ತಿವೆ. ಹಾಗಾಗಿ, ಜೆಡಿಎಸ್‌ ಜತೆಗಿನ ಮೈತ್ರಿಯಿಂದ ದೂರ ಸರಿದಿದ್ದೇವೆ’ ಎಂದು ಎನ್‌. ಮಹೇಶ್ ತಿಳಿಸಿದರು. ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಬೀದರ್‌, ಗುಲಬರ್ಗಾ, ಚಿಕ್ಕೋಡಿ ಹಾಗೂ ಬಾಗಲಕೋಟೆ ಕ್ಷೇತ್ರಗಳನ್ನು ಆದ್ಯತೆಯ ಕ್ಷೇತ್ರಗಳೆಂದು ಪರಿಗಣಿಸಿರುವ ಪಕ್ಷ, ಅಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ.

ADVERTISEMENT

ಚಿಕ್ಕಬಳ್ಳಾಪುರದಿಂದ ಹಿರಿಯ ವಕೀಲ ಸಿ.ಎಸ್‌.ದ್ವಾರಕಾನಾಥ್‌ ಅವರನ್ನು ಕಣಕ್ಕೆ ಇಳಿಸಲು ನಿಶ್ಚಯಿಸಲಾಗಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಎಂ. ವೀರಪ್ಪ ಮೊಯಿಲಿ ಪ್ರತಿನಿಧಿಸುತ್ತಿದ್ದಾರೆ. ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳ ಮೇಲೆ ಪಕ್ಷ ಕಣ್ಣಿಟ್ಟಿದೆ.

‘ನಾನು ಮೊಯಿಲಿ ಅವರಿಗಿಂತ ಪ್ರಬಲ ಸ್ಪರ್ಧಿ. ಕಳೆದ ಚುನಾವಣೆಗಳಲ್ಲಿ ಮೊಯಿಲಿ ಗೆಲುವಿಗೆ ಕಾರಣಕರ್ತರಾದವರಲ್ಲಿ ನಾನೂ ಒಬ್ಬ. ಆದರೆ, ಮೊಯಿಲಿ ಅವರು ಸುಳ್ಳು ಹೇಳುವುದರಲ್ಲಿ ಪರಿಣಿತರು. ನನಗೆ ಉತ್ತಮ ಅವಕಾಶ ಇದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌
ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದು ಉತ್ತಮ’ ಎಂದು ದ್ವಾರಕಾನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.