ADVERTISEMENT

ಸಚಿವ ಪ್ರಕಾಶ್ ಜಾವಡೇಕರ್‌ ಹಚ್ಚಿದ ಕಿಡಿ: ‘ಮಿತ್ರ’ರ ಸಿಡಿನುಡಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 20:00 IST
Last Updated 5 ಡಿಸೆಂಬರ್ 2018, 20:00 IST
   

ಬೆಂಗಳೂರು: ‘ಕರ್ನಾಟಕ ರಾಜಕೀಯದಲ್ಲಿ ಭೂಕಂಪವಾಗಲಿದೆ. ಮೈತ್ರಿ ಸರ್ಕಾರ ಸ್ಥಿರವಾಗಿಲ್ಲ. ಡಿಸೆಂಬರ್ ಬಳಿಕ ಧಮಾಕ ನಡೆಯಲಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೀಡಿರುವ ಹೇಳಿಕೆಗೆ ಜೆಡಿಎಸ್‌–ಕಾಂಗ್ರೆಸ್‌ ಮಿತ್ರ ಪಕ್ಷಗಳ ನಾಯಕರು ತಿರುಗಿ ಬಿದ್ದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ನಮ್ಮ ಸರ್ಕಾರ ಬಂಡೆ ರೀತಿ ಇದೆ. ಆರು ತಿಂಗಳಿನಿಂದ ಭೂಕಂಪದ ಆಗುತ್ತಿದೆ. ಸದ್ದು ಬರುತ್ತಿದೆ ಬಿಟ್ಟರೆ ಬೇರೆ ಏನೂ ಆಗುತ್ತಿಲ್ಲ. ಸರ್ಕಾರ ಪತನದ ವಿಚಾರ ಈಗ ಸತ್ತು ಹೋಗಿದೆ’ ಎಂದು ವ್ಯಂಗ್ಯವಾಡಿದರು.

ಕುದುರೆ ವ್ಯಾಪಾರ ನಡೆಸಲು ಬಿಜೆಪಿ ಮುಂದಾಗಿರುವುದನ್ನು ಜಾವಡೇಕರ್ ಹೇಳಿಕೆ ದೃಢಪಡಿಸಿದೆ ಎಂದು ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದಾರೆ.

ADVERTISEMENT

ಬೆಳಗಾವಿ ಅಧಿವೇಶನದ ಹೊತ್ತಿಗೆ ಏನು ಬೇಕಾದರೂ ಆಗಬಹುದು. ಅಧಿವೇಶನ ಪೂರ್ಣಗೊಳ್ಳುವುದೇ ಅನುಮಾನ ಎಂಬ ಮಾತು ಬಿಜೆಪಿ, ಕಾಂಗ್ರೆಸ್‌ ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಬುಧವಾರ ಇಡೀ ದಿನದ ರಾಜಕೀಯ ವಿದ್ಯಮಾನ ಜಾವಡೇಕರ್ ಹೇಳಿಕೆಯ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.

ಈ ಮಧ್ಯೆ ರಾಜ್ಯದ ಬೇರೆ ಬೇರೆ ಕಡೆ ಮಾತನಾಡಿರುವ ಬಿಜೆಪಿ ಶಾಸಕರು, ಜನರ ಹಿತ ಮರೆತಿರುವ ಸರ್ಕಾರದ ಪತನ ಸನ್ನಿಹಿತವಾಗಿದೆ ಎಂದೂ ಪ್ರತಿಪಾದಿಸಿದ್ದಾರೆ.

ಕುದುರೆ ವ್ಯಾಪಾರ ದೃಢ: ಡಿಕೆಶಿ

ಹತಾಶೆಯಿಂದ ಮಾತನಾಡುತ್ತಿರುವ ಬಿಜೆಪಿ ನಾಯಕರು, ಈ ಮೂಲಕ ಕುದುರೆ ವ್ಯಾಪಾರ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

‘ಆಮಿಷ, ತಂತ್ರಗಳಿಗೆ ನಾವು ಮಣಿಯುವುದಿಲ್ಲ. ಕುಮಾರಸ್ವಾಮಿ ಅವರಿಗೆ ನಾವು ಮಾತು ಕೊಟ್ಟಿದ್ದೇವೆ. ಐದು ವರ್ಷ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ. ರಾಜ್ಯದಲ್ಲಿ ನಡೆಯುತ್ತಿದ್ದ ಕುದುರೆ ವ್ಯಾಪಾರ ರಾಷ್ಟ್ರ ನಾಯಕರವರೆಗೆ ತಲುಪಿರುವುದನ್ನು ಜಾವಡೇಕರ್ ಹೇಳಿಕೆ ಬಹಿರಂಗಪಡಿಸಿದೆ. ನಿಮ್ಮಷ್ಟು ನಾವು ಬುದ್ಧಿವಂತರಲ್ಲ. ಹಾಗಂತ, ಅಜ್ಞಾನಿಗಳಲ್ಲ’ ಎಂದು ಅವರು ಹೇಳಿದರು.

‘ಬಿಜೆಪಿಯಲ್ಲೇ ಭೂಕಂಪ, ಕಾದು ನೋಡಿ’

‘ಸ್ವಲ್ಪ ದಿನ ಕಾದು ನೋಡಿ ಬಿಜೆಪಿಯಲ್ಲೇ ಭೂಕಂಪ ಆಗಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಯಡಿಯೂರಪ್ಪನವರು ಆರು ತಿಂಗಳಿನಿಂದ ಹೇಳುತ್ತಿದ್ದಾರೆ. ಆದರೆ ಏನೂ ಆಗಲಿಲ್ಲ. ಇಷ್ಟು ದಿನ ಗೋವಾ, ಮಹಾರಾಷ್ಟ್ರ ಅಂತ ಹೇಳುತ್ತಿದ್ದರು. ಈಗ ಈ ವಿಚಾರ ದೆಹಲಿಗೆ ತಲುಪಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ಚುನಾವಣೆಯಲ್ಲಿ ಸೋಲಿನ ಭೀತಿ ಇದೆ. ಹಾಗಾಗಿ ವಿಷಯಾಂತರ ಮಾಡಲು ಕರ್ನಾಟಕ ರಾಜಕೀಯವನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.

10 ಶಾಸಕರು ಬಂದರೆ ಬಿಜೆಪಿ ಸರ್ಕಾರ : ಕೋಟ

ಬೆಳಗಾವಿ: ‘ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಜತೆಗಿರುವ 10 ಮಂದಿ ಶಾಸಕರನ್ನು ಕರೆತಂದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಮೇಶ ಮಾನಸಿಕವಾಗಿ ಸರ್ಕಾರದಿಂದ ದೂರವಾಗಿ ಬಹಳ ದಿನಗಳಾಗಿರುವುದು ಎಲ್ಲರಿಗೂ ಗೊತ್ತಾಗಿರುವ ವಿಷಯ. ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ’ ಎಂದರು.

‘ಸಿದ್ದರಾಮಯ್ಯ ಸಿ.ಎಂ ಆಗಬೇಕೆನ್ನುವುದು ಕನಸು’

‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವುದು ಕಾಂಗ್ರೆಸ್‌ನ 50 ಶಾಸಕರ ಕನಸಾಗಿದ್ದು, ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ’ ಎಂದು ಶಾಸಕ ಜೆ.ಎನ್‌. ಗಣೇಶ್‌ ತಿಳಿಸಿದರು.

2019ರ ಲೋಕಸಭೆ ಚುನಾವಣೆ ನಂತರ, ಕಾಂಗ್ರೆಸ್‌ ಶಾಸಕರ ಆಶಯದಂತೆ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ ಎಂದರು.

**

ಅವರ ಕುದುರೆ ವ್ಯಾಪಾರ ಗುಟ್ಟಾಗಿ ಉಳಿದಿಲ್ಲ. ಆರು ತಿಂಗಳಿಂದ ಹುಲಿ ಬಂತು ಹುಲಿ ಕಥೆ ಹೇಳುತ್ತಿದ್ದಾರೆ. ಏನು ಆಗುತ್ತದೆಯೋ ನಾವು ನೋಡುತ್ತೇವೆ. ಅವರ ಈ ಹೇಳಿಕೆಗಳು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ
- ಸಾ.ರಾ. ಮಹೇಶ್, ಪ್ರವಾಸೋದ್ಯಮ ಸಚಿವ

**

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಹಲವು ಕುತಂತ್ರಗಳನ್ನು ಮಾಡಿ ವಿಫಲರಾದ ಅವರು, ಈಗ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ
- ಆರ್.ವಿ. ದೇಶಪಾಂಡೆ, ಕಂದಾಯ ಸಚಿವ

**

ಯಾವ ಧಮಾಕಾನೂ ಇಲ್ಲ, ಭೂಕಂಪಾನೂ ಇಲ್ಲ. ಕುಮಾರಣ್ಣನ ಸರ್ಕಾರ ಸುಗಮವಾಗಿ ಐದು ವರ್ಷ ಪೂರೈಸಲಿದೆ
- ಬಂಡೆಪ್ಪ ಕಾಶೆಂಪೂರ, ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.