ADVERTISEMENT

ವಿಶ್ವಾಸಮತ | ರಾಮಲಿಂಗಾ ರೆಡ್ಡಿ ಬೆಂಬಲಿಗ ಶಾಸಕರ ಸೆಳೆಯಲು ‘ಮೈತ್ರಿ’ ಯತ್ನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 17:46 IST
Last Updated 20 ಜುಲೈ 2019, 17:46 IST
   

ಬೆಂಗಳೂರು: ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ ಅವರು, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.

‘ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೆವು. ರೆಡ್ಡಿ ಕೈಕೊಟ್ಟರು’ ಎಂದು ಅತೃಪ್ತ ಶಾಸಕರು ಕಿಡಿಕಾರಿದ್ದರು.

‘ಐವರು ಶಾಸಕರೇ ನನ್ನನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟು ಸರ್ಕಾರ ಬೀಳಿಸೋಣ ಎಂದು ಬಲವಂತ ಮಾಡಿದರು. ಮೈತ್ರಿ ಸರ್ಕಾರದ ನಡವಳಿಕೆ, ಕಾಂಗ್ರೆಸ್‌ ನಾಯಕರ ನಿರ್ಲಕ್ಷ್ಯ ಧೋರಣೆಯಿಂದ ಸಿಟ್ಟಾಗಿದ್ದ ನಾನು ರಾಜೀನಾಮೆ ಕೊಟ್ಟೆ. ನಾನು ಬಿಜೆಪಿ ಸೇರುವುದಿಲ್ಲ ಎಂದು ಅವರಿಗೆ ಆಗಲೇ ಸ್ಪಷ್ಟಪಡಿಸಿದ್ದೆ’ ಎಂದುಗೌಡರ ಭೇಟಿ ವೇಳೆ ರಾಮಲಿಂಗಾರೆಡ್ಡಿ ವಿವರಣೆ ಕೊಟ್ಟರು ಎಂದು ಮೂಲಗಳು ಹೇಳಿವೆ.

ADVERTISEMENT

‘ಸರ್ಕಾರ ಬೀಳಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಅಸಮಾಧಾನ ಹೊರಹಾಕಲು ರಾಜೀನಾಮೆ ಕೊಟ್ಟಿದ್ದೆ ಎಂದು ಗೌಡರಿಗೆ ಮನವರಿಕೆ ಮಾಡಲು ಯತ್ನಿಸಿದರು’ ಎನ್ನಲಾಗಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೆಡ್ಡಿ, ‘ಸೌಜನ್ಯದ ಭೇಟಿ ಇದಾಗಿತ್ತು. ಅತೃಪ್ತ ಶಾಸಕರನ್ನು ಸಂಪರ್ಕಿಸುವ ಬಗ್ಗೆ ಯಾವುದೇ ಮಾತುಕತೆಯನ್ನೂ ಆಡಿಲ್ಲ’ ಎಂದು ಹೇಳಿದರು.

‘ಉಪಮುಖ್ಯಮಂತ್ರಿ ಸ್ಥಾನ ನೀಡುವ ಕೊಡುಗೆ ಮುಂದಿಟ್ಟ ಕಾರಣಕ್ಕೆ ನಾನು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂದೆಗೆದುಕೊಂಡಿದ್ದೇನೆ ಎಂಬುದು ಸುಳ್ಳು ವದಂತಿ. ನಾನು ಯಾವುದೇ ಸ್ಥಾನ ನಿರೀಕ್ಷಿಸಿ ರಾಜೀನಾಮೆ ಹಿಂಪಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.