ADVERTISEMENT

ಬೆಂಗಳೂರಿಗೆ ಕುಡಿಯುವ ನೀರು ಕೊಡಿ: ದೇವೇಗೌಡ

ಅಧ್ಯಯನ ತಂಡ ಕಳುಹಿಸಲು ಕೇಂದ್ರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 0:57 IST
Last Updated 6 ಏಪ್ರಿಲ್ 2022, 0:57 IST
ದೇವೇಗೌಡ
ದೇವೇಗೌಡ   

ನವದೆಹಲಿ: ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ಕಾವೇರಿ ಕಣಿವೆ ವ್ಯಾಪ್ತಿಯ 3 ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳಿಸಿ, ವಾಸ್ತವಾಂಶದ ವರದಿ ತರಿಸಿಕೊಳ್ಳಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಕೋರಿದರು.

ರಾಜ್ಯಸಭೆಯಲ್ಲಿ ಮಂಗಳವಾರ ಶೂನ್ಯವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಕುಡಿಯುವ ನೀರಿಗಾಗಿ ಬೆಂಗಳೂರು ನಗರದ ಜನತೆ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿರುವುದು ದುರದೃಷ್ಟಕರ ಹಾಗೂ ಅತ್ಯಂತ ನೋವಿನಸಂಗತಿ ಎಂದರು.

‘ಕಾವೇರಿ ಜಲವಿವಾದ ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ ಸಂಪೂರ್ಣ ನ್ಯಾಯ ದೊರೆತಿಲ್ಲ. ಅಂದಾಜು 1.30 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿ ಬೆಂಗಳೂರಿಗೆ ಕೇವಲ 4.75 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿರುವುದು ವಿಷಾದನೀಯ’ ಎಂದರು.

ADVERTISEMENT

‘ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಯಾವುದೇ ಜಲಾಶಯ ನಿರ್ಮಿಸುವಂತೆ ಕೋರುವುದಿಲ್ಲ. ಬದಲಿಗೆ, ಬೆಂಗಳೂರು ನಗರದ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವತ್ತ ಸರ್ಕಾರ ಮುಂದಾಗಬೇಕು’ ಎಂದು ಅವರು ಮನವಿ ಮಾಡಿದರು.

‘ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಕಳೆದ 200 ವರ್ಷಗಳಿಂದ ಎಷ್ಟು ಪ್ರಮಾಣದ ಅನ್ಯಾಯ ಆಗಿದೆ ಎಂಬ ಕುರಿತು ಸದನದಲ್ಲಿ ಕೂಲಂಕುಷವಾಗಿ ಪ್ರಸ್ತಾಪಿಸಬಲ್ಲೆ. ಕುಡಿಯುವ ನೀರಿನ ಅತಿಯಾದ ಸಮಸ್ಯೆ ಕರ್ನಾಟಕದಾದ್ಯಂತ ಇದೆ. ಆದರೆ, ಕಡೆಯ ಪಕ್ಷ ಬೆಂಗಳೂರು ನಗರಕ್ಕೆ ಅಗತ್ಯ ಪ್ರಮಾಣದ ನೀರನ್ನು ಹಂಚಿಕೆ ಮಾಡಲು ಪಕ್ಷಭೇದ ಮರೆತು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.