ADVERTISEMENT

ಸರ್ಕಾರ ಉರುಳಿಸುವುದರಲ್ಲಿ ಕಾಂಗ್ರೆಸ್‌ ನಿಪುಣ: ಎಚ್‌.ಡಿ.ಕುಮಾರಸ್ವಾಮಿ

‘ಕೈ’ ನಾಯಕರಿಗೆ ಎಚ್‌ಡಿಕೆ ಕುಟುಕು

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 20:00 IST
Last Updated 28 ಜುಲೈ 2020, 20:00 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಶಾಸಕರ ಖರೀದಿ, ಸರ್ಕಾರಗಳನ್ನು ಉರುಳಿಸುವುದರಲ್ಲಿ ಕಾಂಗ್ರೆಸ್‌ ನಿಪುಣತೆ ಹೊಂದಿದೆ. ಆ ಪಕ್ಷದವರಿಗೆ ಪ್ರಜಾತಂತ್ರದ ಬಗ್ಗೆ ಮಾತನಾಡುವನೈತಿಕತೆ ಇಲ್ಲ’ ಎಂದು‌ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿ ರಾಜಸ್ಥಾನದಲ್ಲಿ ಸರ್ಕಾರ ಉರುಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಹೋರಾಟ ಮಾಡುತ್ತಿದೆ. ಆದರೆ, ರಾಜಸ್ಥಾನದಲ್ಲಿ ಸರ್ಕಾರ ರಚಿಸಲು ಬೆಂಬಲ ನೀಡಿದ ಬಿಎಸ್‌ಪಿಯ ಎಲ್ಲ ಶಾಸಕರನ್ನು ಸೆಳೆಯುವ ಮೂಲಕ ಖರೀದಿ ಮಾಡಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.

‘ಕಷ್ಟ ಕಾಲದಲ್ಲಿ ಸರ್ಕಾರ ರಚಿಸಲು ಬೆಂಬಲಿಸಿದ್ದವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನಗೊಳಿಸುವುದು ಪ್ರಜಾಪ್ರಭುತ್ವದ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು, ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಡುತ್ತಾರೆ. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೆ’ ಎಂದೂ ಕುಮಾರಸ್ವಾಮಿ ಕುಟುಕಿದ್ದಾರೆ.

ADVERTISEMENT

‘ಈಗ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್‌ ಹಿಂದೆ ಜೆಡಿಎಸ್‌ ಪಕ್ಷವನ್ನು ಒಡೆದಿಲ್ಲವೆ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಶಾಸಕರನ್ನು ರಾಜ್ಯಸಭಾ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕ ನಡೆಯೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ಅಪರಾಧಿಗಳೇ’ ಎಂದು ಅವರು ಹೇಳಿದ್ದಾರೆ.

‘ಅಷ್ಟೇ ಅಲ್ಲ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್‌ ಪಕ್ಷ ನಮ್ಮ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರ ಸರ್ಕಾರವನ್ನು ರಚಿಸಲು ಹೊಂಚು ಹಾಕಿರಲಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್‌ಗೆ ನೈತಿಕತೆ ಇದೆಯೇ’ ಎಂದೂ ಕುಮಾರಸ್ವಾಮಿ ಕೇಳಿದ್ದಾರೆ.

‘ಹಿಂದೆ ಕಾಂಗ್ರೆಸ್‌– ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್‌ನವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯಿತು. ಪಕ್ಷವನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಹಾರದಲ್ಲಿ ಕಾಂಗ್ರೆಸ್‌ ನಿಪುಣತೆ ಪಡೆದಿದೆ’ ಎಂದು ಗೇಲಿ ಮಾಡಿದ್ದಾರೆ.

ಪ್ರಾಣ ಕೊಡಬೇಡಿ, ಜೀವ ಅಮೂಲ್ಯ:‘ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ. ಸ್ವಾಮೀ, ಜೀವ ಅಮೂಲ್ಯ. ನೀವು ಪ್ರಾಣ ಕೊಡುವುದು ಬೇಡ. ಕಾಂಗ್ರೆಸ್‌ ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳಿ. ನಂತರ ಪಕ್ಷಾಂತರ ನಿಷೇಧ ಕಾಯ್ದೆ ಸದೃಢಗೊಳಿಸುವತ್ತ ಚಿಂತನೆ ಮಾಡಿ. ಪ್ರಜಾಪ್ರಭುತ್ವ ತಂತಾನೆ ಉಳಿಯುತ್ತದೆ’ ಎಂದಿದ್ದಾರೆ.

‘ಕುದುರೆ ವ್ಯಾಪಾರ’ ಎಂಬ ಪದ ಹುಟ್ಟಿದ್ದೇ ಕಾಂಗ್ರೆಸ್‌ನಿಂದ ಎಂದು ಕುಮಾರಸ್ವಾಮಿ ಅವರು ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.