ADVERTISEMENT

ಜೆಡಿಎಸ್ ಮುಖಂಡ ರಾಜಗೋಪಾಲ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಆರೋಪಿಗಳ ಕಾಲಿಗೆ ಗುಂಡಿನ ದಾಳಿ ನಡೆಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 3:42 IST
Last Updated 20 ನವೆಂಬರ್ 2018, 3:42 IST
ಪೊಲೀಸ್ ಕಾರ್ಯಾಚರಣೆ ನಡೆದ ಪ್ರದೇಶ
ಪೊಲೀಸ್ ಕಾರ್ಯಾಚರಣೆ ನಡೆದ ಪ್ರದೇಶ   

ರಾಮನಗರ:ಕನಕಪುರದಲ್ಲಿ ಈಚೆಗೆ ನಡೆದಿದ್ದ ಜೆಡಿಎಸ್ ಮುಖಂಡ ಟಿ.ಆರ್. ರಾಜಗೋಪಾಲ್ ಹತ್ಯೆ ಆರೋಪಿಗಳ ಮೇಲೆ ಮಂಗಳವಾರ ನಸುಕಿನಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ.

ದೀಪು (27) ಹಾಗೂ ರಾಮು (21) ಎಂಬ ಆರೋಪಿಗಳ ಕಾಲಿಗೆ ಗುಂಡು ತಗುಲಿದೆ. ಇವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಮುಖ್ಯ ಆರೋಪಿ, ದೀಪು ಸಹೋದರ ಕೌಶಿಕ್ ಪರಾರಿಯಾಗಿದ್ದಾನೆ. ಇದೇ ತಿಂಗಳ 12ರಂದು ಕನಕಪುರ ಜನನ ನಗರದಲ್ಲಿ ಆರೋಪಿಗಳು ರಾಜಗೋಪಾಲ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

‘ಆರೋಪಿಗಳು ಕನಕಪುರ ತಾಲ್ಲೂಕಿನ ಸಾತನೂರು ಬಳಿ ಪೈಪ್ ಲೈನ್ ರಸ್ತೆಯಲ್ಲಿರುವ ರೈಲ್ವೆ ಶೆಡ್ ಒಂದರಲ್ಲಿ ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ಸರ್ಕಲ್ ಇನ್ ಸ್ಪೆಕ್ಟರ್ ಮಲ್ಲೇಶ್ ಹಾಗೂ ಸಿಬ್ಬಂದಿ ಅವರ ಬಂಧನಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದರು. ಗಾಳಿಯಲ್ಲಿ ಗುಂಡು ಹಾರಿಸಿದರೂ ಅವರು ಬಗ್ಗದ ಕಾರಣ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು.‌ ಮತ್ತೊಬ್ಬ ಆರೋಪಿ ಕೌಶಿಕ್ ಸ್ಥಳದಿಂದ ಪರಾರಿಯಾದ’ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಮಾಹಿತಿ ನೀಡಿದರು.

ADVERTISEMENT

ಘಟನೆಯಲ್ಲಿ ಇನ್‌ಸ್ಪೆಕ್ಟರ್ ಮಲ್ಲೇಶ್ ಹಾಗೂ ಹೆಡ್ ಕಾನ್‌ಸ್ಟೆಬಲ್ ಗೋವಿಂದಪ್ಪ ಅವರಿಗೆ ಗಾಯಗಳಾಗಿದ್ದು, ಅವರಿಗೆ ತಾಲ್ಲೂಕು‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಘಟನಾ ಸ್ಥಳಕ್ಕೆ ಎಸ್ಪಿ ರಮೇಶ್ ಭೇಟಿ‌ ನೀಡಿ ಪರಿಶೀಲಿಸಿದರು.

ಆರೋಪಿ ರಾಮು
ಆರೋಪಿ ದೀಪು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.