ADVERTISEMENT

ಜೆಡಿಎಸ್‌ ‘ಭಿನ್ನ’ರ ಸಭೆ ಇಂದು

ನಾಯಕತ್ವದ ವಿರುದ್ಧ ತಣಿಯದ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:45 IST
Last Updated 21 ಅಕ್ಟೋಬರ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜೆಡಿಎಸ್‌ ನಾಯಕತ್ವದ ವಿರುದ್ಧ ಎದ್ದಿರುವ ಅಸಮಾಧಾನ ತೀವ್ರಗೊಂಡಿದ್ದು, ಈ ಸಂಬಂಧ ಭಿನ್ನಮತೀಯ ನಾಯಕರು ಮಂಗಳವಾರ ನಗರದಲ್ಲಿ ಸಭೆ ನಡೆಸಲಿದ್ದಾರೆ.

ಈ ಸಭೆಯಲ್ಲಿ ಅಸಮಾಧಾನಿತ ನಾಯಕರ ನಡೆಗೆ ಸ್ಪಷ್ಟ ರೂಪ ಸಿಗಲಿದೆ. ಸಭೆಯಲ್ಲಿ ಶಾಸಕರು ಮತ್ತು ವಿಧಾನಪರಿಷತ್‌ನ ಸದಸ್ಯರು ಸೇರಿ ಒಟ್ಟು 27 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

‘ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮತ್ತು ಇನ್ನೂ ಹಲವು ಶಾಸಕರಿಗೆ ನಾಯಕತ್ವ ತಮ್ಮನ್ನು ಕಡೆಗಣಿಸಿದೆ ಎಂಬ ಭಾವನೆ ಇದೆ. ಪಕ್ಷದ ವರಿಷ್ಠ ಎಚ್‌. ಡಿ. ದೇವೇಗೌಡ ಅವರು ಈಗಾಗಲೇ ಹೊರಟ್ಟಿ ಜತೆಗೆ ಮಾತುಕತೆ ನಡೆಸಿದ್ದು, ಭಿನ್ನಮತ ಶಮನಗೊಳ್ಳುವ ಲಕ್ಷಣ ಇದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜೆಡಿಎಸ್‌ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನವೆಂಬರ್‌ ಮೊದಲ ವಾರ ಮಂಗಳೂರಿನಲ್ಲಿ ಸಭೆ ನಡೆಸುತ್ತಾರೆ ಎಂಬ ವದಂತಿ ಹಬ್ಬಿದ್ದು, ಅದರಲ್ಲಿ ಹುರುಳಿಲ್ಲ. ಮಂಗಳೂರಿನಲ್ಲಿ ಇಂತಹ ಸಭೆ ನಡೆಯಬೇಕಿದ್ದರೆ ವಿಧಾನ ಪರಿಷತ್‌ ಸದಸ್ಯಬಿ. ಎಂ. ಫಾರೂಕ್‌ ಅವರೇ ನೇತೃತ್ವ ವಹಿಸಬೇಕು. ಆದರೆ ಅವರು ಅಂತಹ ಸಭೆ ಇರುವ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ’ ಎಂದು ದೇವೇಗೌಡರಿಗೆ ನಿಕಟರಾದ ಪಕ್ಷದ ಇನ್ನೊಬ್ಬ ಮುಖಂಡರು ತಿಳಿಸಿದರು.

ಅಸಮಾಧಾನ ಏಕಾಗಿ?: ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ಅವರು ಕೆಲವೇ ಕೆಲವು ಶಾಸಕರನ್ನು ತಮ್ಮ ಹತ್ತಿರಕ್ಕೆ ಬಿಟ್ಟುಕೊಂಡು, ಹಿರಿಯ ನಾಯಕರನ್ನು ಕಡೆಗಣಿಸಿದ್ದರು. ಈ ವಿಚಾರವೇ ಬಹುತೇಕ ಎಲ್ಲ ಶಾಸಕರ ಅಸಮಾಧಾನಕ್ಕೆ ಕಾರಣ. ‘ಅಧಿಕಾರದಲ್ಲಿ ಇದ್ದಾಗ ನಾವು ಅವರಿಗೆ ಬೇಕಾಗಲಿಲ್ಲ, ಪಕ್ಷ ಕಟ್ಟುವಾಗ ನಮ್ಮ ನೆನಪಾಗಿದೆ, ನಾವೇಕೆ ಸಹಕರಿಸಬೇಕು’ ಎಂಬುದು ಅಸಮಾಧಾನಿತ ನಾಯಕರ ಪ್ರಶ್ನೆ.

ಜಿ. ಟಿ. ದೇವೇಗೌಡ ಅವರು ಈಗಾಗಲೇ ಬಿಜೆಪಿಯತ್ತ ವಾಲಿದ್ದು, ಇತರ ಕೆಲವು ಶಾಸಕರು ಮೂರು ಗುಂಪುಗಳಾಗಿ ಪಕ್ಷದ ನಾಯಕತ್ವಕ್ಕೆ ಸಡ್ಡು ಹೊಡೆಯಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಗುಬ್ಬಿ ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಅವರ ನೇತೃತ್ವದ ತಂಡ ಕಾಂಗ್ರೆಸ್‌ನತ್ತ ವಾಲಿದೆ ಎಂಬ ಮಾತು ಕೇಳಿಬಂದಿದೆ. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಇನ್ನೊಂದು ತಂಡ ಹಾಗೂ ನಾಗಮಂಗಲದ ಮಾಜಿ ಶಾಸಕ ಸುರೇಶ್ ಬಾಬು ನೇತೃತ್ವದಲ್ಲಿ ಮತ್ತೊಂದು ತಂಡ ತಮ್ಮ ಹಿತಾಸಕ್ತಿ ಪೋಷಿಸುವಲ್ಲಿ ಸಕ್ರಿಯವಾಗಿವೆ. ಸಾ. ರಾ. ಮಹೇಶ್‌ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಇನ್ನೂ ಹಿಂದಕ್ಕೆ ಪಡೆದಿಲ್ಲದಿರುವುದನ್ನೂ ಹಲವರು ಗಂಭೀರವಾಗಿಯೇ ಪರಿಗಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.