ADVERTISEMENT

2ಡಿಜಿ ಔಷಧಿ ವಿತರಣೆಗೆ ಜೆಡಿಎಸ್‌ ಚಿಂತನೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:00 IST
Last Updated 17 ಮೇ 2021, 19:00 IST

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ‘2ಡಿಜಿ’ ಔಷಧಿಯನ್ನು ಖರೀದಿಸಿ ಕೋವಿಡ್‌ ರೋಗಿಗಳಿಗೆ ವಿತರಿಸಲು ಜೆಡಿಎಸ್‌ ಚಿಂತನೆ ನಡೆಸಿದೆ.

ರಾಜ್ಯದಲ್ಲಿನ ಕೋವಿಡ್‌ ಸ್ಥಿತಿಗತಿ ಮತ್ತು ಪಕ್ಷದ ವತಿಯಿಂದ ಜನರಿಗೆ ನೀಡುತ್ತಿರುವ ನೆರವಿನ ಕುರಿತು ಜೆಡಿಎಸ್‌ ಶಾಸಕರು ಮತ್ತು ಮುಖಂಡರ ಜತೆ ಸೋಮವಾರ ವರ್ಚ್ಯುವಲ್‌ ಸಭೆ ನಡೆಸಿದ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಈ ಮಾಹಿತಿ ಹಂಚಿಕೊಂಡರು.

‘ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧಿ ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂಬ ಫಲಿತಾಂಶ ಬಂದರೆ ಪಕ್ಷದ ವತಿಯಿಂದ ಖರೀದಿಸಿ, ರಾಜ್ಯದಾದ್ಯಂತ ವಿತರಣೆ ಮಾಡಲಾಗುವುದು. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಪಕ್ಷದ ಶಾಸಕರು, ಮುಖಂಡರಿಗೆ ಸೂಚಿಸಿದರು.

ADVERTISEMENT

ಕೆಲವು ಕಡೆಗಳಲ್ಲಿ ಕೋವಿಡ್‌ ರೋಗಿಗಳಿಂದ ಆಸ್ಪತ್ರೆಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳ ಕುರಿತು ಜೆಡಿಎಸ್‌ ಶಾಸಕರು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನೂ ಮುಖಂಡರು ಗಮನಕ್ಕೆ ತಂದರು. ಎರಡೂ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.