ADVERTISEMENT

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ಎಚ್.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 9:29 IST
Last Updated 25 ಜುಲೈ 2023, 9:29 IST
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ದೇವೇಗೌಡ
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ದೇವೇಗೌಡ   

ಬೆಂಗಳೂರು: 'ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಇದರಲ್ಲಿ ಯಾವ ಅನುಮಾನ ಬೇಡ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾವು ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಷ್ಟು ಸ್ಥಾನಗಳಲ್ಲಾದರೂ ನಾವು ಗೆಲ್ಲಲಿ. ಅದರ ಬಗ್ಗೆ ಚಿಂತಿಸುವುದಿಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ' ಎಂದರು.

'ವಿಧಾನಮಂಡಲದಲ್ಲಿ ವಿಷಯಾಧಾರಿತ ಹೋರಾಟ ನಡೆಸಲು ಬಿಜೆಪಿಗೆ ಬೆಂಬಲ ನೀಡುವುದು ಶಾಸಕಾಂಗ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದು. ಕುಮಾರಸ್ವಾಮಿ ಅವರನ್ನೇ ಬಿಜೆಪಿಯಿಂದ ಪ್ರತಿಪಕ್ಷದ ನಾಯಕರನ್ನಾಗಿ ಮಾಡುತ್ತಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈಗ ಚಿಕ್ಕಮಗಳೂರಿನ ಒಬ್ಬರನ್ನು ಅಧ್ಯಕ್ಷರನ್ನಾಗಿ, ಯತ್ನಾಳ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ‌ ಮಾಡಲು ಒಂದು ಸುತ್ತಿನ ಸಭೆ ನಡೆದಿದೆ. ಆದರೂ ಜೆಡಿಎಸ್ ಬಗ್ಗೆ ಸುಳ್ಳು ಹಬ್ಬಿಸಲಾಗುತ್ತಿದೆ' ಎಂದರು.

ADVERTISEMENT

'ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಮೈತ್ರಿಕೂಟದ ಸಭೆಗೆ ನಮಗೆ ಆಹ್ವಾನ ನೀಡಲು ಜೆಡಿಯು ನಾಯಕ‌ ನಿತೀಶ್ ಕುಮಾರ್ ಬಯಸಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರ‌ ಒಂದು ಬಣ ವಿರೋಧ ವ್ಯಕ್ತಪಡಿಸಿತು. ಹಾಗಾಗಿ ನಮಗೆ ಆಹ್ವಾನ ನೀಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಕಾಂಗ್ರೆಸ್ ಪಕ್ಷದವರಿಗೆ ಬೇಕಾದಾಗ, ದರ್ದು ಇದ್ದಾಗ ನಾವು ಜಾತ್ಯತೀತರು. ಅವರಿಗೆ ಬೇಡವಾದಾಗ ಜಾತ್ಯತೀತರಲ್ಲ' ಎಂದರು.

ರಾಮಕೃಷ್ಣ ಹೆಗಡೆ ಬಿಜೆಪಿ ಬೆಂಬಲದಲ್ಲೇ ಮುಖ್ಯಮಂತ್ರಿ ಆಗಿದ್ದರು. ಅದೇ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಆಗಿರಲಿಲ್ಲವೆ ಎಂದು ಪ್ರಶ್ನಿಸಿದರು.

ಪಕ್ಷ ಸಂಘಟನೆಗಾಗಿ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆಯಲ್ಲಿ 11 ಸದಸ್ಯರ ಸಮಿತಿ ರಚಿಸಲಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಕ್ಷ ಸಂಘಟನೆಗೆ ಕಾರ್ಯತಂತ್ರ ರೂಪಿಸುವ ಸಭೆ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.