ADVERTISEMENT

ಜಿಂದಾಲ್‌: ಜಾರ್ಜ್‌–ಪಾಟೀಲ ಮಧ್ಯೆ ಸಂಧಾನ ಯತ್ನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 18:48 IST
Last Updated 8 ಜೂನ್ 2019, 18:48 IST
ಎಚ್‌.ಕೆ ಪಾಟೀಲ
ಎಚ್‌.ಕೆ ಪಾಟೀಲ   

ಬೆಂಗಳೂರು: ಜಿಂದಾಲ್‌ ಕಂಪನಿಗೆ ಕಡಿಮೆ ದರದಲ್ಲಿ ಭೂಮಿ ಮಾರಾಟ ಮಾಡುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಗದಗ ಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲ ಹಾಗೂ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಮಧ್ಯೆ ಸಂಧಾನ ನಡೆಸುವ ಯತ್ನವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಡೆಸಿದರು.

ಮೊದಲ ಹಂತದ ಮಾತುಕತೆ ನಡೆದಿದ್ದು, ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವುದರಿಂದಾಗಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಕುಳಿತು ಚರ್ಚಿಸಿ ನಿರ್ಣಯ ಕೈಗೊಳ್ಳುವ ನಿರ್ಧಾರಕ್ಕೆ ಮೂವರು ನಾಯಕರು ಬಂದರು ಎಂದು ಮೂಲಗಳು ಹೇಳಿವೆ.

ಇಬ್ಬರು ನಾಯಕರನ್ನೂ ಕೆಪಿಸಿಸಿ ಕಚೇರಿಗೆ ಕರೆಸಿಕೊಂಡ ದಿನೇಶ್‌, ಈ ವಿಷಯದಲ್ಲಿ ಟ್ವಿಟರ್‌ ಹಾಗೂ ಹೇಳಿಕೆಗಳ ಸಮರ ನಡೆಸುವ ಬದಲು ಪಕ್ಷದ ವೇದಿಕೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಿ ಎಂದು ಕೋರಿದರು.

ADVERTISEMENT

‘ಈಗಿನ ಸರ್ಕಾರ ಕೈಗೊಂಡ ನಿರ್ಧಾರವಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲೇ ಪ್ರಸ್ತಾಪ ಬಂದಿತ್ತು. ಕಾನೂನು ಇಲಾಖೆ ಹಾಗೂ ಅಡ್ವೋಕೇಟ್ ಜನರಲ್ ಸಲಹೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಕ್ರಯ ಮಾಡಿಕೊಡಲು ಗುರುತಿಸಲಾಗಿರುವ ಭೂಮಿಯಲ್ಲಿ ಕಬ್ಬಿಣದ ಅದಿರು ಇಲ್ಲ. ಕಂಪನಿಯ ಮೂಲಸೌಕರ್ಯಕ್ಕಾಗಿ ಈ ಭೂಮಿ ನೀಡಲು ತೀರ್ಮಾನಿಸಲಾಗಿದೆ. ಕೈಗಾರಿಕೆಗಳು ಬರಬೇಕಾದರೆ ಇಂತಹ ನಿರ್ಧಾರಗಳು ಅನಿವಾರ್ಯ’ ಎಂದು ಜಾರ್ಜ್‌ ಅವರು ಸಮರ್ಥಿಸಿಕೊಂಡರು.

ಜಾರ್ಜ್ ವಾದವನ್ನು ಪಾಟೀಲರು ಒಪ್ಪಲಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಪಕ್ಷ ಗಂಭೀರ ಹೋರಾಟ ನಡೆಸಿ, ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿದ್ದೆವು. ಜಿಂದಾಲ್ ಕಂಪನಿ ಕೂಡ ಅಕ್ರಮ ಅದಿರು ಸಾಗಣೆಯ ಆರೋಪಕ್ಕೆ ಗುರಿಯಾಗಿದೆ. ಸರ್ಕಾರ ಸ್ವಾಮ್ಯದ ಮೈಸೂರು ಮಿನರಲ್ಸ್‌ಗೆ ₹1200 ಕೋಟಿ ಬಾಕಿ ಉಳಿಸಿಕೊಂಡಿದೆ. 3,667 ಎಕರೆಯಷ್ಟು ಭೂಮಿಯನ್ನು ನೀಡುವ ಕ್ರಮ ಜನವಿರೋಧಿಯಾದುದು. ಪಕ್ಷಕ್ಕೆ ಇದರಿಂದ ಒಳ್ಳೆಯ ಹೆಸರು ಬರುವುದಿಲ್ಲ ಎಂದು ಎಚ್.ಕೆ. ಪಾಟೀಲ ಪ್ರತಿಪಾದಿಸಿದರು ಎಂದು ಗೊತ್ತಾಗಿದೆ.

ಸಹಮತ ಸಾಧ್ಯವಿಲ್ಲ ಎಂದು ಗೊತ್ತಾದ ದಿನೇಶ್ ಗುಂಡೂರಾವ್‌, ಮುಖ್ಯಮಂತ್ರಿ ಜತೆ ಕುಳಿತು ತೀರ್ಮಾನಿಸೋಣ ಎಂದು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

**

ನನ್ನ ಅಭಿಪ್ರಾಯಗಳನ್ನು ಜಾರ್ಜ್ ಎದುರೇ ದಿನೇಶ್ ಅವರಿಗೆ ಹೇಳಿದ್ದೇನೆ. ಜಾರ್ಜ್ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ..
ರಾಜ್ಯದ ಹಿತ ಗಮನಲ್ಲಿಟ್ಟುಕೊಂಡು ಮೈತ್ರಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ
- ಎಚ್‌.ಕೆ. ಪಾಟೀಲ, ಕಾಂಗ್ರೆಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.