ADVERTISEMENT

ಶ್ಯಾಂ ಭಟ್ ವಿರುದ್ಧ ಎಫ್‌ಐಆರ್‌

ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಆಮಿಷ * ನಿವೃತ್ತ ಪೊಲೀಸ್ ಅಧಿಕಾರಿಯಿಂದ ದೂರು

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:36 IST
Last Updated 14 ಮೇ 2019, 20:36 IST

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶ್ಯಾಂ ಭಟ್ ಸೇರಿದಂತೆ ಮೂವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನನ್ನ ಮಗನಿಗೆ ಸಬ್‌ಇನ್‌ಸ್ಪೆಕ್ಟರ್‌ ಕೆಲಸ ಕೊಡಿಸುವುದಾಗಿ ಹೇಳಿದ್ದ ನಿವೃತ್ತ ಎಆರ್‌ಎಸ್‌ಐ ಪ್ರದೀಪ್, ಜೆಡಿಎಸ್ ಮುಖಂಡ ಧನರಾಜ್ ಹಾಗೂ ಶ್ಯಾಂ ಭಟ್‌ ಅವರು ಹಣ ಪಡೆದು ವಂಚಿಸಿದ್ದಾರೆ’ ಎಂದು ಸಶಸ್ತ್ರ ಮೀಸಲು ಪಡೆಯ ನಿವೃತ್ತ ಆರ್‌ಎಸ್‌ಐ ಸಿದ್ದಯ್ಯ ದೂರು ನೀಡಿದ್ದಾರೆ. ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ತಿಳಿಸಿದರು.

ದೂರಿನ ವಿವರ: ‘ಮೈಸೂರು ರಸ್ತೆಯಲ್ಲಿರುವ ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡಿದ್ದ ಸಿದ್ದಯ್ಯ ಹಾಗೂ ಪ್ರದೀಪ್, ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ‘ನಿನ್ನ ಮಗನಿಗೆ ಅಬಕಾರಿ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುತ್ತೇನೆ’ ಎಂದು ಸಿದ್ದಯ್ಯ ಅವರಿಗೆ ಪ್ರದೀಪ್ ಭರವಸೆ ನೀಡಿದ್ದರು. ನಂತರ ಧನರಾಜ್‌ ಅವರನ್ನು 2017ರಲ್ಲಿ ಪರಿಚಯ ಮಾಡಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ನನಗೆ ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್ ಸ್ನೇಹಿತ. ನೀವು ₹ 20 ಲಕ್ಷ ಕೊಟ್ಟರೆ, ಶ್ಯಾಂ ಭಟ್ ಅವರನ್ನೇ ನೇರವಾಗಿ ಭೇಟಿ ಮಾಡಿಸಿ ಹುದ್ದೆ ಕೊಡಿಸುತ್ತೇನೆ’ ಎಂದು ಧನರಾಜ್‌ ಭರವಸೆ ನೀಡಿದ್ದರು. ಅವರ ಮಾತು ನಂಬಿದ್ದ ಸಿದ್ದಯ್ಯ, ಮುಂಗಡವಾಗಿ ₹ 10 ಲಕ್ಷ ಕೊಟ್ಟಿದ್ದರು. ಆ ಹಣವನ್ನು ಶ್ಯಾಂ ಭಟ್‌ಗೆ ತಲುಪಿಸಿರುವುದಾಗಿ ಆರೋಪಿ ಹೇಳಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಮೊದಲ ನೇಮಕಾತಿ ಪಟ್ಟಿಯಲ್ಲಿ ಸಿದ್ದಯ್ಯ ಅವರ ಮಗನ ಹೆಸರು ಬಂದಿರಲಿಲ್ಲ. ಆ ಬಗ್ಗೆ ಧನರಾಜ್‌ ಅವರನ್ನು ಕೇಳಿದಾಗ, ಎರಡನೇ ಪಟ್ಟಿಯಲ್ಲಿ ಹೆಸರು ಬರುವುದಾಗಿ ಶ್ಯಾಂ ಭಟ್‌ ತಿಳಿಸಿದ್ದಾರೆ ಎಂದು ಹೇಳಿದ್ದರು. ಆ ಪಟ್ಟಿಯಲ್ಲೂ ಹೆಸರು ಬಂದಿರಲಿಲ್ಲ.’

‘ವಂಚನೆಗೆ ಒಳಗಾಗಿರುವುದು ಗೊತ್ತಾಗಿ, ಹಣ ವಾಪಸು ಕೊಡುವಂತೆ ಸಿದ್ದಯ್ಯ ಒತ್ತಾಯಿಸಿದ್ದರು. ಆಗ ಆರೋಪಿಗಳು, ₹ 3 ಲಕ್ಷ ಮಾತ್ರ ವಾಪಸು ನೀಡಿದ್ದರು. ಉಳಿದ ₹ 7 ಲಕ್ಷವನ್ನು ಇದುವರೆಗೂ ಕೊಟ್ಟಿಲ್ಲ. ಪ್ರದೀಪ್, ಧನರಾಜ್ ಹಾಗೂ ಶ್ಯಾಂ ಭಟ್‌ ಮೂವರೂ ಸೇರಿಕೊಂಡು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶ್ಯಾಂ ಭಟ್ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.