ಬೆಂಗಳೂರು: ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿ ಕೇವಲ ಒಂದು ಸಾಲು ಭಾಷಣ ಓದಿ ನಿರ್ಗಮಿಸುತ್ತಿದ್ದಂತೆಯೇ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಎಸ್. ರವಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕೆಲವು ಶಾಸಕರು ತಡೆಯಲು ಮುಂದಾದರು.
ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ, ವಿಧಾನಸಭೆಯಲ್ಲಿ ಹೈಡ್ರಾಮವೇ ನಡೆಯಿತು. ನಂತರ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರನ್ನು ಬೀಳ್ಕೊಟ್ಟರು.
ರಾಜ್ಯಪಾಲರು ಕಾರು ಹತ್ತಿದ ಕೂಡಲೇ, ‘ಸಂವಿಧಾನ ಧಿಕ್ಕರಿಸಿದ ರಾಜ್ಯಪಾಲರಿಗೆ’ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಸೇರಿ ಇತರರು ಘೋಷಣೆ ಕೂಗಿದರು.
ನಂತರ ಮಾತನಾಡಿದ ಬಿ.ಕೆ. ಹರಿಪ್ರಸಾದ್, ‘ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ರಾಜ್ಯಪಾಲರು ನಡೆದಕೊಂಡಿದ್ದಾರೆ’ ಎಂದು ಆರೋಪಿಸಿದರು.
ಖಂಡ್ರೆ ಅಸಮಾಧಾನ:
‘ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು, ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ ಭಾಷಣವನ್ನು ಓದಬೇಕೇ ಹೊರತು ತಾವೇ ಸಿದ್ಧಮಾಡಿಕೊಂಡ ಭಾಷಣ ಓದಲು ಅವಕಾಶವಿಲ್ಲ. ರಾಜ್ಯಪಾಲರ ಇಂದಿನ ನಡೆ ಸೂಕ್ತವಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.
‘ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ ಮತ್ತು ಇದು ರಾಜ್ಯಪಾಲರ ಸಂವಿಧಾನಾತ್ಮಕ ಕರ್ತವ್ಯವೂ ಆಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿ ಆಗಿರುವುದಿಲ್ಲ. ಆದರೆ, ಅವರು ಇಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.