ಬೆಂಗಳೂರು: ‘ಆರ್‌ಸಿಬಿ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಡಿಎನ್‌ಎ ಎಂಟರ್‌ಟೈನ್ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಪದಾಧಿಕಾರಿಗಳನ್ನು ಬಂಧಿಸಬಾರದು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತಂತೆ ಕಂಪನಿಯ ಮುಖ್ಯಸ್ಥರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲರುಗಳಾದ ಸಂದೇಶ್ ಜೆ.ಚೌಟ, ಸಿ.ವಿ.ನಾಗೇಶ್, ಸಿ.ಕೆ.ನಂದಕುಮಾರ್ ಮತ್ತು ಸಂಪತ್ ಕುಮಾರ್ ಅವರ ಸುದೀರ್ಘ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ನಿರ್ದೇಶಿಸಿತು.
ಒಂದು ಹಂತದಲ್ಲಿ ಅರ್ಜಿದಾರರ ವಾದವನ್ನು ಬಲವಾಗಿ ಅಲ್ಲಗಳೆದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ‘ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡುವುದು ಸುತರಾಂ ಸಲ್ಲದು’ ಎಂದು ಬಲವಾಗಿ ವಿರೋಧಿಸಿದರು.
ಅಂತಿಮವಾಗಿ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಬೇಡ’ ಎಂದು ಅಡ್ವೊಕೇಟ್ ಜನರಲ್ ಮತ್ತು ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರಿಗೆ ಮೌಖಿಕವಾಗಿ ನಿರ್ದೇಶಿಸಿತು. ನಿಖಿಲ್ ಸೋಸಲೆ ಅರ್ಜಿಯನ್ನು ಮಂಗಳವಾರ (ಜೂನ್ 10) ಬೆಳಿಗ್ಗೆಗೆ ಮುಂದೂಡಿತು. ಇತರರ ಅರ್ಜಿಗಳನ್ನು ಇದೇ 12ಕ್ಕೆ ಮುಂದೂಡಿ ಆದೇಶಿಸಿತು.
‘ತಮ್ಮ ಬಂಧನವನ್ನು ಕಾನೂನುಬಾಹಿರ’ ಎಂದು ಆರೋಪಿಸಿ, ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಹಾಗೂ ‘ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ, ಮೆಸರ್ಸ್ ಡಿಎನ್‌ಎ ಎಂಟರ್‌ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟವರ್ಧನ ತಿಮ್ಮಯ್ಯ, ರಾಯಲ್ ಚಾಲೆಂಜರ್ಸ್ ಕಂಪನಿ ಮುಖ್ಯ ನಿರ್ವಹಣಾ ಅಧಿಕಾರಿ ರಾಜೇಶ್ ವಿ.ಮೆನನ್ ಈ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಪತ್ರ: ‘ಕಾಲ್ತುಳಿತ ಘಟನೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಹೈಕೋರ್ಟ್ ವಕೀಲ ಗಿರೀಶ್ ಭಾರದ್ವಾಜ್, ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಟಿ ಮೆಟ್ಟಿಲೇರಿದ ವಿಕಾಸ್ ಕುಮಾರ್
ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ, ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ತಮ್ಮ ಅಮಾನತು ಆದೇಶವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದಾರೆ. ಈ ಕುರಿತಂತೆ ಅವರು ಸೋಮವಾರ ಸಿಎಟಿಯಲ್ಲಿ ಅರ್ಜಿ ಸಲ್ಲಿಸಿದ್ದು, ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.