ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ನಿಮ್ಮ ಕೈ ಕೆಳಗೆ ಕೆಲಸ ಮಾಡುವ, ನಿಮಗೆ ರಿಪೋರ್ಟ್ ಮಾಡಿಕೊಳ್ಳುವ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಏನು ಗುಡ್ಡೆ ಹಾಕುತ್ತಾರೆ ಸಿ.ಎಂ ಅವರೇ?
ವಿರೋಧ ಪಕ್ಷದ ನಾಯಕ ಆರ್. ಅಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೀಗೆ ಪ್ರಶ್ನೆ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ಸಂಭ್ರಮಾಚರಣೆ ವೇಳೆ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಜಿಲ್ಲಾಧಿಕಾರಿಗಳು ತನಿಖೆ ಮಾಡಲಿದ್ದಾರೆ ಎಂದು ಸರ್ಕಾರ ಹೇಳಿದೆ. ಇದನ್ನು ಬಿಜೆಪಿಯ ಆರ್. ಅಶೋಕ ವಿರೋಧಿಸಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದ ಬಗ್ಗೆ ಯೋಚನೆ ಮಾಡಿ, ಅದರ ರೂಪುರೇಷೆ ನಿರ್ಧರಿಸಿ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಸರ್ಕಾರದ ತಪ್ಪುಗಳು, ಲೋಪದೋಷಗಳು, ಎಡವಟ್ಟುಗಳು ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿ ವರದಿ ನೀಡುತ್ತಾರೆ ಅಂದರೆ ಅದನ್ನು ನಂಬಲು ಸಾಧ್ಯವೇ ಮುಖ್ಯಮಂತ್ರಿಗಳೇ?
ಜನಸಾಮಾನ್ಯರಿಗೆ ವಂಚನೆ ಮಾಡಿ ಹೆಣಗಳನ್ನ ಉರುಳಿಸಿದ್ದಾಯ್ತು, ಈಗ ನಿಮಗೆ ನೀವೇ ಆತ್ಮ ವಂಚನೆ ಮಾಡಿಕೊಂಡು ಇನ್ನೊಂದು ಪಾಪ ಯಾಕೆ ಕಟ್ಟಿಕೊಳ್ಳುತ್ತೀರಿ?
ನ್ಯಾಯಾಂಗ ತನಿಖೆಯಿಂದ ಮಾತ್ರ ಅಮಾಯಕ ಜೀವಗಳಿಗೆ, ಅವರ ಹೆತ್ತವರಿಗೆ ನ್ಯಾಯ ಒದಗಿಸಲು ಸಾಧ್ಯ. ಸಾವಿನಲ್ಲೂ ನಿಮ್ಮ ಸಣ್ಣತನ ಪ್ರದರ್ಶನ ಮಾಡುವ ದುಸ್ಸಾಹಸ ಮಾಡಬೇಡಿ ಎಂದು ಅಶೋಕ ಹೇಳಿದ್ದಾರೆ.
ನ್ಯಾಯಾಂಗ ತನಿಖೆ ಮಾಡುವಂತೆ ಅವರು ಸರ್ಕಾರಕ್ಕೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.