ADVERTISEMENT

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ.ಎಲ್‌. ನಾರಾಯಣಸ್ವಾಮಿ ನೇಮಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 13:30 IST
Last Updated 27 ನವೆಂಬರ್ 2023, 13:30 IST
<div class="paragraphs"><p>ನ್ಯಾ.ಎಲ್‌. ನಾರಾಯಣಸ್ವಾಮಿ</p></div>

ನ್ಯಾ.ಎಲ್‌. ನಾರಾಯಣಸ್ವಾಮಿ

   

ಬೆಂಗಳೂರು: ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇವರೊಂದಿಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌.ಕೆ. ವಂಟಿಗೋಡಿ ಮತ್ತು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಟಿ. ಶ್ಯಾಂ ಭಟ್‌ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿದೆ.

ADVERTISEMENT

ಮೂವರನ್ನೂ ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ. ಐದು ವರ್ಷ ಅಥವಾ ಅಧ್ಯಕ್ಷರು ಹಾಗೂ ಸದಸ್ಯರಿಗೆ 70 ವರ್ಷ ವಯಸ್ಸಾಗುವವರೆಗೆ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರವಧಿಯನ್ನು ಹೊಂದಿರುತ್ತಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನವರಾದ ಎಲ್‌. ನಾರಾಯಣಸ್ವಾಮಿ, ಕಾನೂನು ಪದವಿ ಪೂರ್ಣಗೊಳಿಸಿ 1987ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 2007ರ ಜುಲೈ 4ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2009ರ ಏಪ್ರಿಲ್‌ 17ರಿಂದ ಕಾಯಂ ನ್ಯಾಯಮೂರ್ತಿಯಾಗಿದ್ದರು. 2019ರ ಆಗಸ್ಟ್‌ನಲ್ಲಿ ಹಿಮಾಚಲಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಅವರು, 2021ರ ಜುಲೈ 30ರಂದು ನಿವೃತ್ತರಾಗಿದ್ದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಕೆಲವು ತಿಂಗಳುಗಳಿಂದ ಖಾಲಿ ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿ ಇತ್ತೀಚೆಗೆ ಸಭೆ ನಡೆಸಿ, ಮೂವರನ್ನು ಆಯೋಗದ ಅಧ್ಯಕ್ಷ, ಸದಸ್ಯರ ಹುದ್ದೆಗಳಿಗೆ ನೇಮಿಸುವ ತೀರ್ಮಾನ ಕೈಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.