ADVERTISEMENT

ಕೆ.ಸಿ.ವ್ಯಾಲಿಗೆ ತಮಿಳುನಾಡು ವಿರೋಧ

ಪೆನ್ನಾರ್‌, ಪಾಲಾರ್‌ ಜಲವಿವಾದ ಪ್ರಕರಣ: ಇತರ ಯೋಜನೆಗಳಿಗೂ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:15 IST
Last Updated 7 ಮೇ 2019, 20:15 IST
   

ನವದೆಹಲಿ: ಕರ್ನಾಟಕ ಕೈಗೆತ್ತಿಕೊಳ್ಳಲಿರುವ ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ತಮಿಳುನಾಡು, ಇದೀಗ ಪೆನ್ನಾರ್ ಕಣಿವೆ ವ್ಯಾಪ್ತಿಯ ನೀರು ಬಳಸಿಕೊಳ್ಳುವ ರಾಜ್ಯದ ಯೋಜನೆಗಳನ್ನೂ ವಿರೋಧಿಸಿದೆ.*

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ ನಡುವಿನ ಪೆನ್ನಾರ್ ಮತ್ತು ಪಾಲಾರ್ ನದಿ ನೀರಿನ ಹಂಚಿಕೆ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಹೇಳಿಕೆ ಸಲ್ಲಿಸಿರುವ ತಮಿಳುನಾಡು, ಕರ್ನಾಟಕ ಕೈಗೆತ್ತಿಕೊಂಡಿರುವ ಯೋಜನೆಗಳಬಗ್ಗೆತಗಾದೆ ತೆಗೆದಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳಿಗೆ ಶುದ್ಧೀಕರಿಸಿದ ಚರಂಡಿ ನೀರು ಹರಿಸುವ ಕೆ.ಸಿ.ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ) ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಕೋರಿದೆ.

ADVERTISEMENT

ಕಾವೇರಿ ಕಣಿವೆ ವ್ಯಾಪ್ತಿಯಲ್ಲಿರುವ ಬೆಂಗಳೂರು ನಗರದಲ್ಲಿ ಬಳಸಿದ ನೀರನ್ನು ಶುದ್ಧೀಕರಿಸಿದ ನಂತರ ಮತ್ತೆ ಕಾವೇರಿ ನದಿಗೇ ಬಿಡಬೇಕು. ಯಾವುದೇ ಕಾರಣಕ್ಕೂ ಮತ್ತೊಂದು ಕಣಿವೆಯತ್ತ ಹರಿಸಲು ಅವಕಾಶ ನೀಡಬಾರದು ಎಂದು ಕೋರಲಾಗಿದೆ.

ಕರ್ನಾಟಕವು ಪೆನ್ನಾರ್‌ ಕಣಿವೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕೆಲವು ಯೋಜನೆಗಳು ಹಾಗೂ ಕೆ.ಸಿ.ವ್ಯಾಲಿ ಯೋಜನೆಗಳಿಂದ ನದಿಯ ನೈಸರ್ಗಿಕ ಹರಿವು ಸ್ಥಗಿತಗೊಳ್ಳಲಿದೆ ಎಂದು ದೂರಲಾಗಿದೆ. ಜಲಾಶಯಗಳು, ಕೆರೆ–ಕಟ್ಟೆಗಳ ನಿರ್ಮಾಣ, ಚೆಕ್‌ ಡ್ಯಾಮ್‌ ನಿರ್ಮಾಣ ಸೇರಿದಂತೆ ಹತ್ತು ಹಲವು ಯೋಜನೆ ರೂಪಿಸುವ ಮೂಲಕ ಕಾವೇರಿ, ಪೆನ್ನಾರ್‌ ಕಣಿವೆ ವ್ಯಾಪ್ತಿಯ ನದಿ–ತೊರೆಗಳ ಸರಾಗ ಹರಿವನ್ನು ಕರ್ನಾಟಕ ತಡೆಯುತ್ತಿದೆ. ಇದರಿಂದ ನದಿಯ ಕೆಳಹಂತದ ರಾಜ್ಯಗಳಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ತಿಳಿಸಲಾಗಿದೆ.

‘ಕೋಲಾರ ಜಿಲ್ಲೆಯ ಮಾಲೂರು ಬಳಿ ₹ 240 ಕೋಟಿ ಅಂದಾಜು ವೆಚ್ಚದಲ್ಲಿ ಕರ್ನಾಟಕ ಕೈಗೆತ್ತಿಕೊಳ್ಳಲಿರುವ ಮಾರ್ಕಂಡೇಯ ಜಲಾಶಯ ಯೋಜನೆಯಿಂದ ತಮಿಳುನಾಡಿನ ಆರು ಜಿಲ್ಲೆಗಳಿಗೆ ಹರಿಯುವ ಪೆನ್ನಾರ್‌ ನದಿಯ ಹರಿವನ್ನು ತಡೆಯಲಾಗುತ್ತಿದೆ. ಆ ಭಾಗದ ಜನರ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳಿಗೆ ಇದರಿಂದ ಸಮಸ್ಯೆಯಾಗಲಿದೆ. ಈ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಕರ್ನಾಟಕವು ನಮ್ಮಿಂದ ಅನುಮತಿ ಪಡೆಯುವ ಅಗತ್ಯವಿದೆ’ ಎಂದು ಪ್ರತಿಪಾದಿಸಲಾಗಿದೆ.

ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ 2018ರ ಫೆಬ್ರುವರಿ 16ರಂದು ನೀಡಿರುವ ತೀರ್ಪನ್ನು ಕರ್ನಾಟಕ ಉಲ್ಲಂಘಿಸಿದೆ. ಕಾವೇರಿ ನೀರಿನ ಹಂಚಿಕೆಗಾಗಿ 1892 ಮತ್ತು 1933ರಲ್ಲಿ ಮೈಸೂರು ಸಂಸ್ಥಾನ ಮತ್ತು ಮದ್ರಾಸ್‌ ಸರ್ಕಾರಗಳು ಪರಸ್ಪರ ಮಾಡಿಕೊಂಡಿದ್ದ ಒಪ್ಪಂದವನ್ನೂ ಗಾಳಿಗೆ ತೂರಲಾಗಿದೆ ಎಂಬುದು ತಮಿಳುನಾಡಿನ ಆಪಾದನೆಯಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಶುದ್ಧೀಕರಿಸಿದ ಚರಂಡಿ ನೀರು ಹರಿಸುವ ಕೆ.ಸಿ. ವ್ಯಾಲಿ ಯೋಜನೆಯು, ವಿಶೇಷವಾಗಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ. ಆದರೂ ನೆರೆಯ ರಾಜ್ಯದಿಂದ ಇದೀಗ ವಿರೋಧ ವ್ಯಕ್ತವಾಗಿದೆ.

‘ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ ಜಿಲ್ಲೆಗೆ 2.842 ಟಿಎಂಸಿ ಅಡಿ ನೀರು ಪಡೆಯಲು ಮುಂದಾಗಿರುವ ಕರ್ನಾಟಕ, ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರು ನೀಡುವ ಉದ್ದೇಶದಿಂದ ಮಾರ್ಕಂಡೇಯ ಜಲಾಶಯ ಯೋಜನೆ ರೂಪಿಸುತ್ತಿರುವ ಔಚಿತ್ಯವಾದರೂ ಏನು’ ಎಂದೂ ತಮಿಳುನಾಡು ಪ್ರಶ್ನಿಸಿದೆ.

ಕುಡಿಯುವ ನೀರು ಪೂರೈಕೆಯ ಹೆಸರಿನಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಿರುವ ಕರ್ನಾಟಕ, ಈ ಕುರಿತು ನದಿ ಕಣಿವೆ ವ್ಯಾಪ್ತಿಯ ಇತರ ರಾಜ್ಯಗಳಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ದೂರಲಾಗಿದ್ದು, ಬ್ಯಾಲಹಳ್ಳಿ ಏತ ನೀರಾವರಿ, ಹೊಸಕೋಟೆ ಕೆರೆ ಪೂರಣ, ವರ್ತೂರು ಕೆರೆಯಿಂದ ನರಸಾಪುರ ಕೆರೆಗೆ ನೀರು ಹರಿಸುವ ಯೋಜನೆಗಳನ್ನೂ ವಿರೋಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.