ADVERTISEMENT

ಭಕ್ತಿ ಸುಧೆಯನ್ನು ಅರ್ಪಿಸಿದ ಯೇಸುದಾಸ್‌

ಕೊಲ್ಲೂರು : ಮೂಕಾಂಬಿಕೆ ಸನ್ನಿಧಾನದಲ್ಲಿ 79ನೇ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:28 IST
Last Updated 10 ಜನವರಿ 2019, 20:28 IST
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ಬಯಲು ರಂಗ ಮಂಟಪದಲ್ಲಿ ಗುರುವಾರ ಕೆ.ಜೆ.ಯೇಸುದಾಸ್‌ ಸಂಗೀತ ಕಛೇರಿ ನಡೆಸಿದರು.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ಬಯಲು ರಂಗ ಮಂಟಪದಲ್ಲಿ ಗುರುವಾರ ಕೆ.ಜೆ.ಯೇಸುದಾಸ್‌ ಸಂಗೀತ ಕಛೇರಿ ನಡೆಸಿದರು.   

ಕುಂದಾಪುರ: ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್‌ ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಾನದಲ್ಲಿ ಅತ್ಯಂತ ಸರಳವಾಗಿ 79ನೇ ಜನ್ಮದಿನವನ್ನು ಆಚರಿಸಿಕೊಂಡರು.

ಕ್ಷೇತ್ರದ ಅರ್ಚಕ ಎನ್‌.ಗೋವಿಂದ ಅಡಿಗ ಅವರ ಮಾರ್ಗದರ್ಶನದಲ್ಲಿ ಪತ್ನಿ ಪ್ರಭಾ ಯೇಸುದಾಸ್‌ ಹಾಗೂ ಪುತ್ರ ವಿನೋದ್‌ ಯೇಸುದಾಸ್‌ ಅವರೊಂದಿಗೆ ಬೆಳಿಗ್ಗೆಯಿಂದಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು, ದೇವಿಗೆ ಚಂಡಿಕಾ ಹೋಮದ ಸೇವೆ ಅರ್ಪಿಸಿದರು. ದೇವಿಯ ದರ್ಶನ ಪಡೆದ ಅವರು ದೇವಸ್ಥಾನದ ಸ್ವರ್ಣಮುಖಿ ಮಂಟಪದಲ್ಲಿ ಗಾಯನ ಕಛೇರಿ ನಡೆಸುವ ಮೂಲಕ ಸಂಗೀತ ಸುಧೆಯ ಸೇವೆಯನ್ನು ಶ್ರೀ ಮೂಕಾಂಬಿಕಾ ದೇವಿಗೆ ಅರ್ಪಿಸಿದರು.

ಸಂಗೀತರತ್ನ ಕಾಞಂಗಾಡು ಡಾ.ರಾಮಚಂದ್ರನ್ ಹಾಗೂ ಇತರ ಕಲಾವಿದರ ಹಿಮ್ಮೇಳನದಲ್ಲಿ ವಾತಾಪಿ ಗಣಪತಿಂಭಜೇ ಗಾಯನದ ಮೂಲಕ ಕಛೇರಿ ಆರಂಭಿಸಿದ ಯೇಸುದಾಸ್‌, ಪಾವನಗುರು ಪವನಮೂರ್ತಿ.......ವಾಣಿ ವಾಗ್ವೇಶ್ವರ....ಹಾಡನ್ನು ಕಂಚಿನ ಕಂಠದಿಂದ ಹಾಡಿದ ನಂತರ ಇತರ ಕಲಾವಿದರು ಮುಂದುವರೆಸಿದರು. ಕೇರಳ ಹಾಗೂ ಕರ್ನಾಟಕದಿಂದ ಬಂದಿದ್ದ ಅವರ ಅಭಿಮಾನಿಗಳು ಇದಕ್ಕೆ ಸಾಕ್ಷಿಯಾದರು.

ADVERTISEMENT

‘ಸಂಗೀತ ಕಛೇರಿಯ ನಡುವೆ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದ ಅವರು, ತನಗೆ 79 ವರ್ಷ ತುಂಬಿದ್ದರೂ, ಜಗನ್ಮಾತೆಯ ಮುಂದೆ ನಾನಿನ್ನು ಚಿಕ್ಕವನು. ಪಾಶ್ಚಾತ್ಯ ಸಂಗೀತವೆಂದರೆ ಅಬ್ಬರವೇ ಹೊರತು ಅದು ಸುಶ್ರಾವ್ಯವಲ್ಲ. ಮೂಕಾಂಬಿಕೆ ತಾಯಿ ಸನ್ನಿಧಾನದಲ್ಲಿ ಹಾಡದೆ ಇದ್ದರೆ ನನ್ನ ಸ್ವರವೇ ಹೊರಡೊದಿಲ್ಲ.

ಭಾರತೀಯ ಸಂಗೀತ ಸ್ವರಗಳು ಸರಸ್ವತಿ ದೇವಿಗೆ ಅತ್ಯಂತ ಪ್ರಿಯವಾದುದು. ಶೃದ್ಧೆ, ಭಕ್ತಿ ಹಾಗೂ ನಿರಂತರ ಅಭ್ಯಾಸದ ತಪಸ್ಸಿನ ಮೂಲಕ ಸಂಗೀತ ಒಲಿಯುತ್ತದೆ. ವಯಸ್ಸು ದೇಹಕ್ಕೆ ಆಗಿದೆ ಹೊರತು ಮನಸ್ಸಿಗಲ್ಲ’ ಎಂದು ಹೇಳಿದ ಅವರು ನನ್ನಲ್ಲಿನ ಸಂಗೀತಕ್ಕೆ ಇನ್ನೂ ವಯಸ್ಸಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.