ADVERTISEMENT

ಕುರುಬರ ಹೋರಾಟ ಸಿದ್ದರಾಮಯ್ಯಗೆ ಕಿರಿಕಿರಿ: ಸಚಿವ ಕೆ.ಎಸ್‌.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 11:35 IST
Last Updated 10 ಫೆಬ್ರುವರಿ 2021, 11:35 IST
ಕೆ.ಎಸ್‌. ಈಶ್ವರಪ್ಪ 
ಕೆ.ಎಸ್‌. ಈಶ್ವರಪ್ಪ    

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಸೌಲಭ್ಯಕ್ಕೆ ಆಗ್ರಹಿಸಿ ಕುರುಬ ಸಮುದಾಯ ನಡೆಸಿದ ಹೋರಾಟ ಯಶಸ್ವಿಯಾಗಿದ್ದನ್ನು ಕಂಡು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ಹೊಸದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಹಿಂದುಳಿದ ಸಮುದಾಯಗಳನ್ನು ಬಳಸಿಕೊಂಡು ಮುಖ್ಯಮಂತ್ರಿಯಾದರೆ ಹೊರತು ಉತ್ತಮ ಕೆಲಸ ಮಾಡಲಿಲ್ಲ. ಜಾಗೃತ ಕುರುಬ ಸಮುದಾಯ ಅವರನ್ನು ಪಕ್ಕಕ್ಕೆ ಸರಿಸುತ್ತಿದೆ. ಒಬ್ಬಂಟಿ ಆಗುತ್ತಿರುವ ಭಯದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ಕುರುಬರು ಕಣ್ಣು ಮುಚ್ಚಿಕೊಂಡು ವೋಟು ಕೊಟ್ಟು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ, ಅವರು ತಾತ್ಸಾರ ಮಾಡಿದರು. ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಪರಿಶಿಷ್ಟ ಪಂಗಡದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಇದು ಸಾಕಾರಗೊಂಡರೆ ರಾಜ್ಯದ 60 ಲಕ್ಷ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ. ಇದನ್ನು ಸಿದ್ದರಾಮಯ್ಯ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕುಟುಕಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷವನ್ನು ಜನರು ಮೂಲೆಗೆ ತಳ್ಳಿದ್ದಾರೆ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಸಂದೇಶ ರವಾನಿಸಿದ್ದಾರೆ. ಆದರೂ, ಮುಖ್ಯಮಂತ್ರಿ ಆಗಬೇಕು ಎಂಬ ಹಗಲು ಕನಸನ್ನು ಸಿದ್ದರಾಮಯ್ಯ ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಆಗುವ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ರಕ್ತಪಾತವಾಗುವ ಸಾಧ್ಯತೆ ಇದೆ. ನಾಯಕರು ಪರಸ್ಪರ ಬಡಿದಾಡಿಕೊಡು ಸಾಯುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಮೋದಿ ಆಡಳಿತ ಮೆಚ್ಚಿದ ಸಂಕೇತ’

ಮುಂಬರುವ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕೈಗೊಂಡಿರುವ ನಿರ್ಧಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಮೆಚ್ಚಿದ ಸಂಕೇತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅಭಿಪ್ರಾಯಪಟ್ಟರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಬಗ್ಗೆ ದೇವೇಗೌಡರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಅವರು ಮೆಚ್ಚಿಕೊಂಡಿದ್ದಾರೆ ಎಂಬುದು ನನ್ನ ಭಾವನೆ. ಹೀಗಾಗಿ, ಉಪಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.