ADVERTISEMENT

ಬೆಂಗಳೂರು ನಗರದ ‘ಬಿ’ ಖರಾಬು ಜಮೀನು ಸಕ್ರಮಗೊಳಿಸಲು ಸರ್ಕಾರ ತೀರ್ಮಾನ

ಮಾರುಕಟ್ಟೆ ಮೌಲ್ಯದ 4 ಪಟ್ಟು ಹೆಚ್ಚು ದರ ನಿಗದಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 10:30 IST
Last Updated 15 ಸೆಪ್ಟೆಂಬರ್ 2020, 10:30 IST
   

ಬೆಂಗಳೂರು: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 18 ಕಿ.ಮೀ ವ್ಯಾಪ್ತಿಯಲ್ಲಿ ‘ಬಿ’ ಖರಾಬು ಜಮೀನನ್ನು ಬಳಸುತ್ತಿದ್ದವರಿಗೆ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಹೆಚ್ಚು ದರ ವಿಧಿಸಿ ಅವರಿಗೆ ಕೊಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದಕ್ಕಾಗಿ ಭೂಕಂದಾಯ ಕಾಯ್ದೆ ಕಲಂ 64(2) ಮತ್ತು (69) ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಕಷ್ಟು ಬಿ ಖರಾಬು ಜಮೀನು ಲೇಔಟ್‌ಗಳು, ಇನ್ನಿತರ ಕಟ್ಟಡಗಳ ಸಮುಚ್ಛಯಗಳ ಮಧ್ಯೆ ಸಿಕ್ಕಿಗೊಂಡಿವೆ. ಇವುಗಳನ್ನು ಸಿಕ್ಕಿಬಿದ್ದ ಬಿ ಖರಾಬು ಜಮೀನು ಎಂದು ಕರೆಯಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇದು ಅನ್ವಯ ಆಗುವುದಿಲ್ಲ. ಅಲ್ಲದೆ, ನಗರ ಪ್ರದೇಶದಲ್ಲಿ ಕೃಷಿ ಜಮೀನು ಇದ್ದರೆ, ಅವುಗಳನ್ನು ಸಕ್ರಮ ಮಾಡಿಕೊಡುವುದಿಲ್ಲ. ಈ ಸಂಬಂಧ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ಸರ್ಕಾರವೇ ಬಿ ಖರಾಬು ಜಮೀನು ಖುಲ್ಲಾ ಮಾಡುವ ಬಗ್ಗೆ ಆದೇಶ ಹೊರಡಿಸುತ್ತದೆ ಎಂದು ಅವರು ಹೇಳಿದರು.

ADVERTISEMENT

ದೋಣಿ ಮಲೈನಲ್ಲಿ ಗಣಿಗಾರಿಕೆಗೆ ಅನುಮತಿ: ಬಳ್ಳಾರಿ ಜಿಲ್ಲೆ ದೋಣೆಮಲೈನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೇಂದ್ರ ಸ್ವಾಮ್ಯದ ಎನ್‌ಎಂಡಿಸಿ ಕಂಪನಿಗೆ ಸಂಪುಟ ಅನುಮತಿ ನೀಡಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.

ರಾಜ್ಯಕ್ಕೆ ರಾಯಧನ ಶೇ 15 ರಿಂದ ಶೇ 22.5 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹647 ಕೋಟಿ ರಾಯಧನ ಸಿಗಲಿದೆ. ಇಲ್ಲಿ 2018 ರಿಂದ ಗಣಿಗಾರಿಕೆ ನಿಂತು ಹೋಗಿತ್ತು. 600 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಧುಸ್ವಾಮಿ ಹೇಳಿದರು.

ಅಗರ ಕೆರೆಯಿಂದ 50 ಎಂಎಲ್‌ಡಿ ನೀರು ಆನೇಕಲ್‌ಗೆ: ಬೆಂಗಳೂರಿನ ಅಗರ ಕೆರೆಯಿಂದ ಆನೇಕಲ್‌ಗೆ ಪೈಪ್‌ಲೈನ್‌ ಮೂಲಕ 35 ಎಂಎಲ್‌ಡಿ ಬದಲಿಗೆ 15 ಎಂಎಲ್‌ಡಿ ಸೇರಿ 50 ಎಂಎಲ್‌ಡಿ ನೀರು ಒಯ್ದು ಕೆರೆಗಳನ್ನು ತುಂಬಿಸಲಾಗುವುದು.

ಔಷಧ, ವೈದ್ಯಕೀಯ ಉಪಕರಣಗಳ ಖರೀದಿ: 2021 ನೇ ಸಾಲಿಗೆ ನ್ಯಾಷನಲ್‌ ಹೆಲ್ತ್‌ ಮಿಷನ್‌ ಯೋಜನೆ ಅಡಿ ವೈದ್ಯಕೀಯ ಉಪಕರಣ ಖರೀದಿಸಲು ₹25.73 ಕೋಟಿ ಮತ್ತು ಔಷಧ ಖರೀದಿಸಲು ₹24.90 ಕೋಟಿ ಬಳಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.