ADVERTISEMENT

ಪೊಲೀಸರ ಮೇಲಿನ ಕಲ್ಲು ತೂರಾಟ ಪ್ರಕರಣ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಅಂಕುಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 0:07 IST
Last Updated 19 ನವೆಂಬರ್ 2025, 0:07 IST
ಹೈಕೋರ್ಟ್‌
ಹೈಕೋರ್ಟ್‌   

ಕಲಬುರಗಿ: ಅಕ್ರಮ ಜಾನುವಾರು ಸಾಗಣೆಗೆ ಸಂಬಂಧಿಸಿದಂತೆ ಚಿತ್ತಾಪುರದಲ್ಲಿ ನಡೆದಿದ್ದ ಪೊಲೀಸರ ಮೇಲಿನ ಕಲ್ಲು ತೂರಾಟ ಹಾಗೂ ಜೀಪಿಗೆ ಬೆಂಕಿ ಹಚ್ಚಿದ್ದ ಆರೋಪಿಗಳ ಮೇಲಿನ ಪ್ರಕರಣ ಹಿಂಪಡೆದಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ.

2019ರ ಆಗಸ್ಟ್‌ನಲ್ಲಿ ಚಿತ್ತಾಪುರದಲ್ಲಿ ಈ ಘಟನೆ ನಡೆದಿತ್ತು. ‍ಪ್ರಕರಣದಲ್ಲಿ ಹಲವು ಆರೋಪಿಗಳ ಮೇಲೆ ಗುರುತರ ಆರೋಪವಿತ್ತು. ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇದೇ ವರ್ಷ ಈ ಪ್ರಕರಣ ಹಿಂಪಡೆಯಲು ಸಂಪುಟ ಸಭೆಯ ಗಮನ ಸೆಳೆದಿದ್ದರು. ಈ ಸಂಬಂಧ ರಾಜ್ಯ ಸರ್ಕಾರ ಕಾನೂನು
ಅಭಿಪ್ರಾಯವನ್ನೂ ಪಡೆದಿತ್ತು.

‘ಆರೋಪಿಗಳ ವಿರುದ್ಧ ಗುರುತರ ಕೃತ್ಯದ ಪುರಾವೆಗಳಿದ್ದು, ಪ್ರಕರಣ ಹಿಂಪಡೆಯಲು ಯೋಗ್ಯವಲ್ಲ’ ಎಂದು ಕಾನೂನು ಅಭಿಪ್ರಾಯ ನೀಡಿತ್ತು. ಅದಾಗ್ಯೂ ಸರ್ಕಾರ ಈ ಪ್ರಕರಣ ಹಿಂಪಡೆಯಲು ತೀರ್ಮಾನಿಸಿತ್ತು. ಅದರಂತೆ ಸರ್ಕಾರದ ಪರ ವಕೀಲರು ಚಿತ್ತಾಪುರ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಕಲಂ 321ರಡಿ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ್ದ ನ್ಯಾಯಾಲಯ ಪ್ರಕರಣ
ವನ್ನು ವಜಾಗೊಳಿಸಿತ್ತು’ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಪ್ರಕರಣ ಹಿಂಪಡೆಯುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರಿನ ಗಿರೀಶ್ ಭಾರದ್ವಾಜ್ ಎಂಬುವವರು ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಕಲಬುರಗಿ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ನ.14ರಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಬಳಿಕ ನ.18ರಂದು (ಮಂಗಳವಾರ) ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಪೀಠ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಿದೆ.

ಅರ್ಜಿದಾರರ ಪರವಾಗಿ ಹೈಕೋರ್ಟ್‌ ವಕೀಲ ಯಶಸ್‌ ಎಸ್‌. ದೀಕ್ಷಿತ್‌ ವಾದ ಮಂಡಿಸಿದರು. ಸರ್ಕಾರದ ಪರವಾಗಿ ಎಚ್‌ಜಿಪಿ ಗೋಪಿ ಯಾದವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.