ADVERTISEMENT

ಕಲಬುರಗಿ: ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 21:24 IST
Last Updated 16 ನವೆಂಬರ್ 2021, 21:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯ ಮತದಾರರ‌ ಪಟ್ಟಿಯಲ್ಲಿ ಬಿಜೆಪಿಯ ಏಳು ಜನ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆ ಯತ್ನದ ವಿರುದ್ಧ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಕಾಂಗ್ರೆಸ್‌ನವರು ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಇದೇ 20ರಂದು ನಡೆಯಬೇಕಿದ್ದ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯನ್ನು ಮುಂದೂಡಲಾಗಿದೆ.

‘ಜಿಲ್ಲಾ ಆಡಳಿತ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಕ್ರಿಯವಾಗಿದೆ. ಹೀಗಾಗಿ ಮೇಯರ್‌–ಉಪ ಮೇಯರ್‌, ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ಮುಂದೂಡಲಾಗಿದೆ’ ಎಂದು ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಾ.ಎನ್‌.ವಿ. ಪ್ರಸಾದ್‌ ತಿಳಿಸಿದ್ದಾರೆ.

ADVERTISEMENT

‘ಏಳು ಜನ ವಿಧಾನ ಪರಿಷತ್‌ ಸದಸ್ಯರು ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಮಾತ್ರ ಇಲ್ಲಿಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮತದಾರರ‌ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆಗೆ ಅಂಗೀಕಾರ ನೀಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ’ ಎಂದು ಕೆಪಿಸಿಸಿ ವಕ್ತಾರ ಡಾ.ಶರಣಪ್ರಕಾಶ ಪಾಟೀಲ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಪರಿಷತ್‌ ಕಾರ್ಯದರ್ಶಿಯಿಂದ ಪತ್ರ: ವಿಧಾನ ಪರಿಷತ್‌ನ ಏಳು ಜನ ಬಿಜೆಪಿ ಸದಸ್ಯರು ತಮ್ಮ ನೋಡಲ್ ಜಿಲ್ಲೆಯನ್ನಾಗಿ ಕಲಬುರಗಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಅವರ ಹೆಸರನ್ನು ಜಿಲ್ಲೆಯ ದಾಖಲೆಗಳಲ್ಲಿ ಸೇರ್ಪಡೆ ಮಾಡಬೇಕು ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಪತ್ರ ಬರೆದಿದ್ದಾರೆ.

ಆದರೆ, ಮತದಾರರ ಪಟ್ಟಿಯಲ್ಲಿ ಏಳು ಜನ ಸದಸ್ಯರ ಹೆಸರು ಸೇರ್ಪಡೆಯಾಗಿರುವ ಬಗ್ಗೆ ಉಪವಿಭಾಗಾಧಿಕಾರಿ ಇನ್ನೂ ಸ್ಪಷ್ಟಪಡಿಸಿಲ್ಲ.

ಕೆಲವು ತಿಂಗಳ ಹಿಂದೆ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ (ಅಥಣಿ), ತುಳಸಿ ಮುನಿರಾಜುಗೌಡ (ಬೆಂಗಳೂರು), ಪ್ರತಾಪ ಸಿಂಹ ನಾಯಕ್ (ಉಜಿರೆ), ಲೆಹರ್ ಸಿಂಗ್ (ಬೆಂಗಳೂರು), ಭಾರತಿ ಶೆಟ್ಟಿ (ಬೆಂಗಳೂರು), ಡಾ.ಸಾಬಣ್ಣ ತಳವಾರ (ಬೆಳಗಾವಿ), ರಘುನಾಥರಾವ್ ಮಲ್ಕಾಪುರೆ (ಬೀದರ್‌) ಅವರು ತಮ್ಮ ನೋಡಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪರಿಷತ್ ಕಾರ್ಯದರ್ಶಿಗೆ ಪತ್ರ ನೀಡಿದ್ದರು.

ಈ ಕುರಿತು ಸೋಮವಾರ ‌ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ, ‘ಚುನಾಯಿತ ಜನಪ್ರತಿನಿಧಿಗಳು ಬೇರೆ ಬೇರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತದಾನ ಮಾಡಲು ಹೆಸರು ನೋಂದಾಯಿಸಿಕೊಳ್ಳಬಹುದು. ಆದರೆ, ಒಂದು ನಿರ್ದಿಷ್ಟ ಸ್ಥಳದಲ್ಲಿ ಮತದಾನ ಮಾಡುವುದಾಗಿ ತಿಳಿಸಬೇಕು’ ಎಂದಿದ್ದರು.

ಮನೆ ಬಾಡಿಗೆ ಬರೀ ₹3 ಸಾವಿರ!

ಲೆಹರ್‌ ಸಿಂಗ್‌, ಲಕ್ಷ್ಮಣ ಸವದಿ, ರಘುನಾಥರಾವ್ ಮಲ್ಕಾಪುರೆ, ಪ್ರತಾಪಸಿಂಹ ನಾಯಕ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ ಅವರು ಕಲಬುರಗಿ ನಗರದಲ್ಲಿ ಮನೆ ಬಾಡಿಗೆ ಪಡೆದಿದ್ದು, ಬಾಡಿಗೆ ಮೊತ್ತ ತಿಂಗಳಿಗೆ ₹3 ಸಾವಿರ ಮಾತ್ರ! ಇನ್ನು ಸಾಬಣ್ಣ ಅವರು ಪಡೆದಿರುವ ಮನೆ ಬಾಡಿಗೆ ತಿಂಗಳಿಗೆ ₹2500ವಷ್ಟೇ!

ಇವರ ಮನೆ ಬಾಡಿಗೆ ಒಪ್ಪಂದ ಪತ್ರದಲ್ಲಿ ಈ ಮೊತ್ತವನ್ನು ನಮೂದಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಮನೆ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದು, ಆರು ತಿಂಗಳಿನಿಂದ ಕಲಬುರಗಿಯಲ್ಲಿ ವಾಸವಾಗಿದ್ದಾಗಿ ಅವರು ಮತದಾರರ ಪಟ್ಟಿ ನೋಂದಣಾಧಿಕಾರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.