ಬೆಂಗಳೂರು: ‘ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣದ ತುರ್ತು ವಿಚಾರಣೆಗೆ ಧಾರವಾಡದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು’ ಎಂದು ಕೋರಲಾಗಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಾಕ್ಷಿಗಳ ವಿಚಾರಣೆಯನ್ನು ಆಕ್ಷೇಪಿಸಿ ಆರೋಪಿಗಳಾದ ಅಮೋಲ್ ಎ.ಕಾಳೆ, ವಾಸುದೇವ್ ಭಗವಾನ್ ಸೂರ್ಯವಂಶಿ ಮತ್ತು ಶರದ್ ಭಾವುಸಾಹೇಬ್ ಕಲಾಸ್ಕರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ; ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪೂರ್ಣಿಮಾ ಎನ್.ಪೈ ಅವರು ಈ ಕುರಿತಂತೆ ಹೈಕೋರ್ಟ್‌ನ ಆಡಳಿತಾತ್ಮಕ ತೀರ್ಮಾನದ ಅಂಶವನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಆಗಸ್ಟ್ 3ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ಪತ್ರ ಬಂದಿದ್ದು, ಈ ಪ್ರಕರಣದ ವಿಚಾರಣೆಗೆ ಧಾರವಾಡದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಯ ಸಂಬಂಧದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಆದ್ಯತೆಯ ಮೇರೆಗೆ ಹಾಲಿ ಪ್ರಕರಣದ ವಿಚಾರಣೆ ನಡೆಸಿ, ಇತ್ಯರ್ಥಪಡಿಸುವಂತೆ ನಿರ್ದೇಶಿಸಲಾಗಿದೆ’ ಎಂದು ಪೂರ್ಣಿಮಾ ಅವರು ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ.
‘ಈ ಪ್ರಕರಣದಲ್ಲಿ ಇನ್ನೂ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ದಾಖಲಿಸಬೇಕಿದ್ದು, ಅರ್ಜಿದಾರರ ಪರ ವಕೀಲರು ಅನಗತ್ಯ ಅರ್ಜಿಗಳನ್ನು ಸಲ್ಲಿಸುವ ಮೂಲಕ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಅವರು ಆದೇಶದಲ್ಲಿ ದಾಖಲಿಸಿದ್ದಾರೆ.
ಕಲಬುರ್ಗಿ ಅವರನ್ನು ಧಾರವಾಡದ ಅವರ ನಿವಾಸದಲ್ಲಿ 2015ರ ಆಗಸ್ಟ್ 31ರಂದು ಹತ್ಯೆ ಮಾಡಲಾಗಿತ್ತು. 2018-2019ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.