ADVERTISEMENT

ವಾರಾಂತ್ಯದಲ್ಲಿ ‘ಕಲಾನಿಧಿ’ ಸಂಗೀತ ಸುಧೆ

ಸಂಕಷ್ಟದಲ್ಲಿರುವ ಸಂಗೀತ ಕಲಾವಿದರಿಗಾಗಿ ದೇಣಿಗೆ ಸಂಗ್ರಹಿಸುವ ಗುರಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 12:48 IST
Last Updated 24 ಜೂನ್ 2021, 12:48 IST

ಬೆಂಗಳೂರು: ‘ಕೋವಿಡ್‌ನಿಂದಾಗಿ ರಾಜ್ಯದ ಸಂಗೀತ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗಾಗಿ ರೂಪಿಸಲಾಗಿರುವ ‘ಕಲಾನಿಧಿ’ ಸಂಗೀತ ಕಾರ್ಯಕ್ರಮ ಇದೇ25 ರಿಂದ27ರವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದೆ. ಎಲ್ಲರೂ ಇದನ್ನು ವೀಕ್ಷಿಸಿ ಕೈಲಾದಷ್ಟು ದೇಣಿಗೆ ನೀಡಿ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮನವಿ ಮಾಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕ ವಿಜಯ್‌ ಪ್ರಕಾಶ್‌ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು (ಮೂವರು) ಹೊಂದಿರುವ ಖಾತೆಗಳು ಹಾಗೂ ಯೂಟ್ಯೂಬ್‌ನಲ್ಲಿ ಶುಕ್ರವಾರ ಮತ್ತು ಶನಿವಾರ ಸಂಜೆ7 ರಿಂದ ರಾತ್ರಿ 10 ಹಾಗೂ ಭಾನುವಾರ ಸಂಜೆ4 ರಿಂದ ರಾತ್ರಿ 10 ಗಂಟೆವರೆಗೆ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಕಾರ್ಯಕ್ರಮ ವೀಕ್ಷಿಸುತ್ತಿರುವಾಗಲೇ ಯಾವ ಖಾತೆಗೆ ಹಣ ವರ್ಗಾಯಿಸಬೇಕು ಎಂಬ ಮಾಹಿತಿತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ದೇಣಿಗೆಯಿಂದ ಸಂಗ್ರಹವಾಗುವ ಹಣವನ್ನು ಕಲಾವಿದರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು’ ಎಂದರು.

ಸಂಸದ ತೇಜಸ್ವಿ ಸೂರ್ಯ ‘ಕೋವಿಡ್‌ನಿಂದಾಗಿ ಸಂಗೀತ ಕಲಾವಿದರ ಬದುಕು ದುಸ್ಥರವಾಗಿದೆ. ಆರ್ಕೆಸ್ಟ್ರಾಗಳು, ಸಂಗೀತ ಕಚೇರಿಗಳನ್ನು ನಡೆಸಲಾಗದೆ ಅವರೆಲ್ಲಾ ಕಷ್ಟಕ್ಕೆ ಸಿಲುಕಿದ್ದಾರೆ. ಕಲಾ ಸೇವಕರ ಸಹಾಯಕ್ಕೆ ನಿಧಿ ಸಂಗ್ರಹಣಾ ಅಭಿಯಾನ ಹಮ್ಮಿಕೊಂಡಿದ್ದೇವೆ. ಚಲನಚಿತ್ರ, ಜಾನಪದ, ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದರು ಕಲಾನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಿದ್ದಾರೆ. ಕಲಾವಿದರೇ ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಈ ಹಣ ಅರ್ಹರಿಗೇ ಸೇರುತ್ತದೆ’ ಎಂದು ಹೇಳಿದರು.

ADVERTISEMENT

ಗಾಯಕ ವಿಜಯ್‌ ಪ್ರಕಾಶ್‌ ‘ಗುರುಕಿರಣ್‌, ಅರ್ಜುನ್‌ ಜನ್ಯ, ರಾಜೇಶ್‌ ಕೃಷ್ಣನ್‌, ಅರ್ಚನಾ ಉಡುಪ, ಅನುರಾಧ ಭಟ್‌, ರಘು ದೀಕ್ಷಿತ್‌ ಹೀಗೆ100ಕ್ಕೂ ಹೆಚ್ಚು ಗಾಯಕರು ಸಂಭಾವನೆ ಪಡೆಯದೆ ಹಾಡಿದ್ದಾರೆ. ಸಕ್ರಿಯವಾಗಿ ಕಲಾ ಸೇವೆ ಮಾಡಿರುವ, ಕಲೆಗಾಗಿಯೇ ಬದುಕುತ್ತಿರುವವರಿಗೆ ಈ ಹಣ ಸೇರುತ್ತದೆ. ಈಗಾಗಲೇ 400ಕ್ಕೂ ಹೆಚ್ಚು ಕಲಾವಿದರ ಪಟ್ಟಿ ಸಿದ್ಧಪಡಿಸಲಾಗಿದೆ. ನಾವು ಕೊಡುತ್ತಿರುವ ಹಣ ಅರ್ಹರಿಗೆ ತಲುಪುತ್ತಿದೆಯೇ ಎಂಬುದನ್ನು ತೇಜಸ್ವಿ ಸೂರ್ಯ ಅವರ ತಂಡ ಪರಿಶೀಲಿಸುತ್ತದೆ. ಕಾರ್ಯಕ್ರಮಕ್ಕಾಗಿ ಸತತ ನಾಲ್ಕು ದಿನ ಚಿತ್ರೀಕರಣ ನಡೆಸಲಾಗಿದೆ. ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ ಸೋನು ನಿಗಂ ಅವರು ಹಿಂದಿ ಹಾಡೊಂದನ್ನು ಹಾಡಿದ್ದಾರೆ. ಅದನ್ನು ಬಿಟ್ಟು ಉಳಿದೆಲ್ಲವೂ ಕನ್ನಡ ಹಾಡುಗಳೇ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.