ADVERTISEMENT

ಕಳಸಾ–ಬಂಡೂರಿ: ಬೇಕು ₹2 ಸಾವಿರ ಕೋಟಿ

ಕಣಕುಂಬಿ ತಡೆಗೋಡೆ ತೆರವಾದರೆ ಹರಿಯಲಿದೆ ನೀರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:45 IST
Last Updated 28 ಫೆಬ್ರುವರಿ 2020, 19:45 IST
ಬಿಎಸ್‌ವೈ
ಬಿಎಸ್‌ವೈ   

ಬೆಂಗಳೂರು: ಕರ್ನಾಟಕದ ಪಾಲಿಗೆ ದಕ್ಕಿರುವ ಮಹದಾಯಿ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು, ಜನರ ದಾಹ ತಣಿಸಲು ಈಗಿನ ಲೆಕ್ಕಾಚಾರದಲ್ಲಿ ₹2 ಸಾವಿರ ಕೋಟಿ ಬೇಕಾಗುತ್ತದೆ.

ಮಹದಾಯಿ ನದಿ ನೀರನ್ನು ಹಂಚಿಕೆ ಮಾಡಿ ಜಲ ವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ಯೋಜನೆ ಅನುಷ್ಠಾನದ ಲೆಕ್ಕಾಚಾರವನ್ನು ಜಲಸಂಪನ್ಮೂಲ ಇಲಾಖೆ ಆರಂಭಿಸಿದೆ.

2006ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ವಿಶೇಷ ಆಸಕ್ತಿ ವಹಿಸಿದ ಫಲವಾಗಿ ‘ಕಳಸಾ–ಬಂಡೂರಿ’ ನಾಲಾ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ₹125 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಳಸಾ ನಾಲೆ ಹಾಗೂ ಬಂಡೂರಿ ನಾಲೆಗಳಿಂದ ಹರಿಯುವ ನೀರನ್ನು ಮಲಪ‍್ರಭಾಕ್ಕೆ ಸೇರಿಸಿ ಕುಡಿಯುವ ನೀರಿನ ಬರ ಇಂಗಿಸುವುದು ಯೋಜನೆಯ ಆಶಯ. ಗೋವಾ ತಕರಾರಿನ ಬಳಿಕ ಯೋಜನೆ ನನೆಗುದಿಗೆ ಬಿದ್ದಿತ್ತು.

ADVERTISEMENT

‘ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ನಾಲೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ನಾಲೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಲಾಗಿದೆ. ಈಗ ಅಧಿಸೂಚನೆ ಹೊರಡಿಸಿರುವುದರಿಂದ ಗೋಡೆ ತೆರವು ಮಾಡಲು ಅಡ್ಡಿಯಿಲ್ಲ. ಕೆಲವು ಕಡೆ ಬಾಕಿ ಇರುವ ನಾಲಾ ಕಾಮಗಾರಿಗಳನ್ನು ಮುಗಿಸಲು ತಕ್ಷಣಕ್ಕೆ ₹400 ಕೋಟಿ ಬೇಕಾಗುತ್ತದೆ. ಕಾಮಗಾರಿ ಮುಗಿಸಿ, ಗೋಡೆ ತೆರವು ಮಾಡಿದರೆ ನೀರು ಮಲಪ್ರಭೆಗೆ ಹರಿಯಲಿದೆ. ಬಂಡೂರಿ ನಾಲೆಯ 500 ಮೀಟರ್‌ನಷ್ಟು ಉದ್ದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಈ ಕಾಮಗಾರಿಗೆ ಅರಣ್ಯ ಸಚಿವಾಲಯದ ಒಪ್ಪಿಗೆ ಅಗತ್ಯ. ಅದು ಸಿಕ್ಕಿದ ಕೂಡಲೇ ಬಾಕಿ ಇರುವ ನಾಲೆ ನಿರ್ಮಾಣ ಮಾಡಬೇಕು. ಕಾಮಗಾರಿ, ಭೂ ಸ್ವಾಧೀನಕ್ಕೆ ಪರಿಹಾರ ಸೇರಿದಂತೆ ಸುಮಾರು ₹1,600 ಕೋಟಿ ಬೇಕು’ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ.

‘ಬಜೆಟ್‌ನಲ್ಲಿ ಹೆಚ್ಚಿನ ಅನುದಾನ’

ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಜಲ ವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹೇಳಿದರು.

ಕಳಸಾ ಬಂಡೂರಿ ಕಾಮಗಾರಿಗೆ ಈ ಬಾರಿಯ ಬಜೆಟ್‌ನಲ್ಲೇ ಹೆಚ್ಚಿನ ಅನುದಾನ ಒದಗಿಸುವುದರ ಮೂಲಕ ಕೆಲಸ ಆರಂಭಿಸಲು ಚಾಲನೆ ನೀಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ, ಮಹದಾಯಿ ಯೋಜನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಅಡಚಣೆ ನಿವಾರಣೆಯಾಗಿದೆ ಎಂದರು.

ಕಳಸಾ–ಬಂಡೂರಿಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ₹200 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ
-ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.