ADVERTISEMENT

ಬಾಲ ಪ್ರತಿಭೆಗಳಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 20:01 IST
Last Updated 8 ಜನವರಿ 2019, 20:01 IST
ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಮಕ್ಕಳೊಂದಿಗೆ ಸಚಿವೆ ಜಯಮಾಲಾ, ಬಾಲಭವನದ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ  ಪ್ರಜಾವಾಣಿ ಚಿತ್ರ
ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಮಕ್ಕಳೊಂದಿಗೆ ಸಚಿವೆ ಜಯಮಾಲಾ, ಬಾಲಭವನದ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ  ಪ್ರಜಾವಾಣಿ ಚಿತ್ರ   

ಬೆಂಗಳೂರು: ಸುಶ್ರಾವ್ಯವಾಗಿ ಹಾಡಿದ, ಜೇಡಿಮಣ್ಣಿನಿಂದ ಆಕರ್ಷಕ ಕಲಾಕೃತಿಗಳನ್ನು ರಚಿಸಿದ, ಚಿತ್ರಕಲೆ ಬಿಡಿಸಿದ, ಕವಿತೆ, ಕಥೆ, ಪ್ರಬಂಧಗಳನ್ನು ಬರೆದ, ವಾದ್ಯಗಳನ್ನು ನಾದಮಯವಾಗಿ ನುಡಿಸಿದ ವಿದ್ಯಾರ್ಥಿಗಳಿಗೆ ‘ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಭವನ ಸೊಸೈಟಿಯು ಮಂಗಳವಾರ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ, ಕಲಾಶ್ರೀ ಶಿಬಿರದ ಸಮಾರೋಪ’ದಲ್ಲಿ 21 ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರಶಸ್ತಿಯು ತಲಾ ₹ 5 ಸಾವಿರ ಒಳಗೊಂಡಿದೆ.

‘ಅಯ್ಯೋ ಅಮ್ಮಣ್ಣಿಗಳ ಇಷ್ಟಕ್ಕೆಲ್ಲಾ ಅಳ್ತಾರಾ’: 29 ಜಿಲ್ಲೆಗಳ 180 ಮಕ್ಕಳುಶಿಬಿರದಲ್ಲಿ ಭಾಗವಹಿಸಿದ್ದರು. ಬಹುಮಾನ ಸಿಗದ ಕೆಲವು ಮಕ್ಕಳು ಕಣ್ಣೀರು ಹಾಕುವಾಗ, ಅವರನ್ನು ವೇದಿಕೆ ಮೇಲೆ ಕರೆದ ಸಚಿವೆ ಜಯಮಾಲಾ, ‘ಅಯ್ಯೋ ಅಮ್ಮಣ್ಣಿಗಳ ಇಷ್ಟಕ್ಕೆಲ್ಲಾ ಅಳ್ತಾರಾ? ನೀವು ಇಂದು ಸೋತಿರಬಹುದು, ನಿಮ್ಮ ಪ್ರಯತ್ನ ಮುಂದುವರಿಸಿ, ನಾಳೆ ಖಂಡಿತಾ ಗೆಲ್ಲುತ್ತೀರಾ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವವರೆಗೂ ನೀವು ಬೆಳೆಯಿರಿ’ ಎಂದು ಧೈರ್ಯ ತುಂಬಿ, ಪ್ರಮಾಣಪತ್ರಗಳನ್ನು ನೀಡಿದರು.

ADVERTISEMENT

‘ಮುದ್ದು ಮಕ್ಕಳೇ, ವಿಡಿಯೊ ಗೇಮ್‌ಗಳಿಗೆ ನೀವು ದಾಸರಾಗಬೇಡಿ. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

**

ಈ ಹಿಂದೆ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲೇ ಸೋತಿದ್ದೆ. ಪ್ರಯತ್ನಿಸಿ ಈ ಬಾರಿ ಆಯ್ಕೆಯಾದೆ. ಜೇಡಿಮಣ್ಣಿನ ಚಮ್ಮಾರನ ಆಕೃತಿಗೆ ಬಹುಮಾನ ಬಂದಿದೆ.

-ಪಿ.ಎನ್‌.ಮೋಕ್ಷ, ಕೊಡಗು

**

ಕಲೆಯಿಂದಾಗಿ ಜನರ ಪ್ರೀತಿ–ವಿಶ್ವಾಸ ಸಿಗುತ್ತದೆ. ವಿಜ್ಞಾನದ ಉಪನ್ಯಾಸಕಿ ಆಗಬೇಕು ಅಂದುಕೊಂಡಿದ್ದೇನೆ. ಸ್ಯಾಕ್ಸೋಫೋನ್ ವಾದಕಿಯಾಗುವ ಹಂಬಲವಿದೆ.

-ವರ್ಷಿತಾ, ಮಂಡ್ಯ

**

ಈ ಹಿಂದೆಯು ಶಿಬಿರಕ್ಕೆ ಆಯ್ಕೆ ಆಗಿದ್ದೆ. ಬಹುಮಾನ ಸಿಕ್ಕಿರಲಿಲ್ಲ. ವರ್ಷದಿಂದ ಹಾಡಲು ಅಭ್ಯಾಸ ಮಾಡಿದೆ. ಬಹುಮಾನ ಬಂದಿರುವುದು ಖುಷಿಯಾಗುತ್ತಿದೆ.

-ದೀಕ್ಷಿತ್‌ ವೈಷ್ಣವ್‌, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.