ADVERTISEMENT

ಕಲಬುರ್ಗಿ ಹತ್ಯೆ; ಅಮೋಲ್ ಕಾಳೆ ವಿಚಾರಣೆ

ಕೃತ್ಯಕ್ಕೆ ಬಳಸಿದ್ದ ಬೈಕ್‌ ಮಹಾರಾಷ್ಟ್ರದಲ್ಲಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ಮೇ 2019, 19:45 IST
Last Updated 30 ಮೇ 2019, 19:45 IST
ಎಂ.ಎಂ. ಕಲಬುರ್ಗಿ
ಎಂ.ಎಂ. ಕಲಬುರ್ಗಿ   

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್‌ ಕಾಳೆಯನ್ನು ವಶಕ್ಕೆ ಪ‍ಡೆದು ವಿಚಾರಣೆ ನಡೆಸುತ್ತಿದ್ದಾರೆ.

ದೇಶದಲ್ಲಿ ನಡೆದ ವಿಚಾರವಾದಿಗಳ ಕೊಲೆ ಹಿಂದೆ ಒಂದೇ ತಂಡ ಕೆಲಸ ಮಾಡಿರುವ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ. ಅದೇ ಕಾರಣಕ್ಕೆ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಅಮಿತ್‌ ಬದ್ದಿ, ಗಣೇಶ್‌ ಮಿಸ್ಕಿನ್‌ ಹಾಗೂ ವಾಸುದೇವ್‌ ಸೂರ್ಯವಂಶಿಯನ್ನು ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ಕಸ್ಟಡಿಗೆ ಪಡೆದು ಎಸ್‌ಐಟಿ ಈಗಾಗಲೇ ವಿಚಾರಣೆ ಪೂರ್ಣಗೊಳಿಸಿದೆ.

ಈ ಮೂವರು ನೀಡಿದ್ದ ಮಾಹಿತಿ ಆಧರಿಸಿ ಧಾರವಾಡ ಜಿಲ್ಲಾ ನ್ಯಾಯಾಲಯದ ಅನುಮತಿ ಪಡೆದು ಅಮೋಲ್‌ ಕಾಳೆಯನ್ನು ಸಹ ಎಸ್‌ಐಟಿ ಅಧಿಕಾರಿಗಳು ಇದೇ 28ರಂದು ಕಸ್ಟಡಿಗೆ ಪಡೆದಿದ್ದಾರೆ. ಬೆಂಗಳೂರಿನ ಅಜ್ಞಾತ ಪ್ರದೇಶದಲ್ಲಿ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

‘ಗೌರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರೇ ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ಶಾಮೀಲಾಗಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಹೀಗಾಗಿ, ಒಬ್ಬೊಬ್ಬರನ್ನಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಕೊಲೆ ಆರೋಪಿಗಳು ಯಾರು ಎಂಬುದು ನಿಖರವಾಗಿ ಗೊತ್ತಾಗಲಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕೃತ್ಯಕ್ಕೆ ಬಳಸಿದ್ದ ಬೈಕ್‌ ಮಹಾರಾಷ್ಟ್ರದಲ್ಲಿ: ‘ಆರೋಪಿವಾಸುದೇವ್‌ ಸೂರ್ಯವಂಶಿ, ಮೆಕ್ಯಾನಿಕ್ ಆಗಿದ್ದ. ಆತನೇ ಹುಬ್ಬಳ್ಳಿಗೆ ಬಂದು ವ್ಯಕ್ತಿಯೊಬ್ಬರ ಬೈಕ್ ಕದ್ದುಕೊಂಡು ಹೋಗಿದ್ದ. ಕಲಬುರ್ಗಿ ಹತ್ಯೆ ಮಾಡಲು ಅದೇ ಬೈಕ್‌ನಲ್ಲೇ ಆರೋಪಿಗಳು ಧಾರವಾಡಕ್ಕೆ ಬಂದಿದ್ದರು ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ಎಸ್‌ಐಟಿ ಅಧಿಕಾರಿಗಳು, ಈ ಹಿಂದೆಯೇ ವಾಸುದೇವ್‌ನನ್ನು ಬಂಧಿಸಿದ್ದರು. ಆತನ ಮನೆಯಲ್ಲಿದ್ದ ಬೈಕ್ ಜಪ್ತಿ ಮಾಡಿದ್ದರು. ಬೈಕ್‌ ಬಗ್ಗೆ ಪರಿಶೀಲಿಸಿದಾಗ, ಅದರ ಮಾಲೀಕ ಹುಬ್ಬಳ್ಳಿಯವರು ಎಂಬುದು ತಿಳಿದಿತ್ತು. ಬೈಕ್ ಕಳೆದ ಬಗ್ಗೆ ಆತ ಠಾಣೆಗೂ ದೂರು ನೀಡಿದ್ದ.’

‘ಕಲಬುರ್ಗಿ ಹತ್ಯೆ ಬಳಿಕ ಕಿತ್ತೂರಿಗೆ ಹೋಗಿದ್ದ ಆರೋಪಿಗಳು, ಅಲ್ಲಿಯ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಪರಾರಿಯಾಗಿದ್ದರು. ಮತ್ತೊಬ್ಬ ವ್ಯಕ್ತಿಗೆ ಕಿತ್ತೂರಿಗೆ ಬಂದು ಆ ಬೈಕ್ ತೆಗೆದುಕೊಂಡು ಮಹಾರಾಷ್ಟ್ರಕ್ಕೆ ಹೋಗಿದ್ದ. ನಂತರ, ಆ ಬೈಕ್‌ನ್ನು ಹಲವು ಕೃತ್ಯಗಳಿಗೆ ಬಳಸಲಾಗಿದೆ. ಆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.