ADVERTISEMENT

ಕನಕದಾಸ ಜಯಂತಿ ರದ್ದು ಮಾಡಿ: ಕುರುಬ ಸಮಾಜದ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:24 IST
Last Updated 8 ನವೆಂಬರ್ 2019, 19:24 IST

ದಾವಣಗೆರೆ: ಮುಂದಿನ ವರ್ಷದಿಂದ ಕನಕದಾಸ ಜಯಂತಿಯನ್ನು ರದ್ದು ಮಾಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿ ಎಂದು ಕುರುಬ ಸಮಾಜದ ಮುಖಂಡರು ಆಗ್ರಹಿಸಿದರು.

ಕನಕ ಜಯಂತಿ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಅವರಲ್ಲಿ ಈ ರೀತಿ ಹೇಳಿದರು.

ಸಮಾಜದ ಮುಖಂಡರಾದ ಬಿ.ಎಚ್. ಹನುಮಂತಪ್ಪ, ‘ಪ್ರತಿಯೊಂದು ಜಾತಿಯವರಿಗೂ ಒಂದೊಂದು ಜಯಂತಿಗಳು ಇವೆ. ಎಲ್ಲಾ ಜಯಂತಿಗಳಿಗೂ ಒಂದೊಂದು ರಜೆ ನೀಡುವುದು ಬೇಡ’ ಎಂದರು.

ADVERTISEMENT

‘ಟಿಪ್ಪು ಜಯಂತಿ ಆರಂಭಿಸಿ ಸರ್ಕಾರ ಈಗ ರದ್ದು ಮಾಡಲು ಹೊರಟಿದೆ. ನಮ್ಮ ಸಮಾಜಕ್ಕೂ ಹೀಗಾಗುವುದು ಬೇಡ. ಈಗ ಜಾತಿಗೊಂದು ಜಯಂತಿಗಳು ಇವೆ. ಆದ್ದರಿಂದ ಯಾವ ಜಯಂತಿಗೂ ರಜೆ ಬೇಡ, ನೌಕರ ವರ್ಗದವರಿಗೆ ರಜೆ ಇರುತ್ತದೆ. ಆದರೆ ಅವರು ಯಾರೂ ಬರುವುದಿಲ್ಲ. ನಮ್ಮಿಂದಲೇ ಇದು ಆರಂಭವಾಗಲಿ’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಕುರುಬರ ಸಂಘದ ಅಧ್ಯಕ್ಷ ಕೆಂಗೋ ಹನುಮಂತಪ್ಪ ಮತ್ತು ಇತರರು ಈ ಮನವಿಗೆ ಸಮ್ಮತಿಸಿದರು. ಸಮಾಜದ ಮುಖಂಡ ಗೌಡ್ರ ಚನ್ನಬಸಪ್ಪನವರು ‘ಸಮಾಜದ ಜಿಲ್ಲಾ, ತಾಲ್ಲೂಕು ಸಮಿತಿಗಳಲ್ಲಿ ಜಯಂತಿ ರದ್ದತಿ ಬೇಕಾ ಬೇಡವಾ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳೋಣ’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.