ADVERTISEMENT

‘ಕನಸು ಮಾರಾಟಕ್ಕಿದೆ’ 15ಕ್ಕೆ ಪ್ರೀಮಿಯರ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:11 IST
Last Updated 5 ಜನವರಿ 2021, 12:11 IST
 ಕನಸು ಮಾರಾಟಕ್ಕಿದೆ
 ಕನಸು ಮಾರಾಟಕ್ಕಿದೆ   

ಮಂಗಳೂರು: ಶ್ರೀ ಪಾಷಾಣ ಮೂರ್ತಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಸ್ಮಿತೇಶ್ ಎಸ್.ಬಾರ್ಯ ನಿರ್ದೇಶನದ ‘ಕನಸು ಮಾರಾಟಕ್ಕಿದೆ’ ಸಿನಿಮಾವು ‘ಟಾಕೀಸ್’ ಎಂಬ ಓಟಿಟಿ ಆ್ಯಪ್‍ನಲ್ಲಿ ಜ.15ರಿಂದ 22ರವರೆಗೆ ಪ್ರದರ್ಶನಗೊಳ್ಳಲಿದೆ.

‘ಸಮಾಜದ ವಿವಿಧ ಸ್ತರದ, ನಾನಾ ಅಭಿರುಚಿಯ ಜನರ ಕನಸುಗಳನ್ನು ಸಾದರಪಡಿಸುವ ವಿಭಿನ್ನ ಕಥಾಹಂದರದ ಚಿತ್ರ ಇದಾಗಿದ್ದು, ಯುವಕರು ಸೇರಿಕೊಂಡು ನಿರ್ಮಿಸಿದ್ದೇವೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಚಿತ್ರಕ್ಕೆ ಸಂಭಾಷಣೆ ಬರೆದ ಅನೀಶ್ ಪೂಜಾರಿ ತಿಳಿಸಿದರು.

‘ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮೂರು ಹಾಡುಗಳ್ನು ಜನ ಮೆಚ್ಚಿದ್ದಾರೆ. ₹150 ಕೊಟ್ಟು ಒಟಿಟಿ ಖರೀದಿಸಿದರೆ, ವೀಕ್ಷಕರು ಎರಡು ಬಾರಿ ವೀಕ್ಷಿಸಲು ಅವಕಾಶವಿದೆ. ಟಿಕೆಟ್ ದರದಿಂದ ಸಂಗ್ರಹವಾಗುವ ಮೊತ್ತದ ಒಂದು ಪಾಲನ್ನು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ಅವರು ತುರುವೇಕರೆಯ ಮಾಯಸಂದ್ರದಲ್ಲಿ ನಿರ್ಮಿಸಲಿರುವ ನಿರ್ಗತಿಕರ ಅನಾಥಾಶ್ರಮಕ್ಕೆ ನೀಡುವ ಉದ್ದೇಶವಿದೆ’ ಎಂದರು.

ADVERTISEMENT

ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ ನೀಡಿದ್ದಾರೆ. ಗೀತೆ ರಚನೆಕಾರ ಕವಿರಾಜ್, ನಿರ್ದೇಶಕ ಚೇತನ್, ಸಾಹಿತಿ ಡಾ.ನಾಗೇಂದ್ರ ಪ್ರಸಾದ್, ಸುಕೇಶ್, ಮಜಾ ಟಾಕೀಸ್ ಖ್ಯಾತಿಯ ರೆಮೋ ಕನಸಿನ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ.

‘ನಾಯಕನಾಗಿ ಪ್ರಜ್ಞೇಶ್ ಶೆಟ್ಟಿ, ನಾಯಕಿಯಾಗಿ ಸ್ವಸ್ತಿಕ ಪೂಜಾರಿ, ನವ್ಯ ಪೂಜಾರಿ ನಟಿಸಿದ್ದಾರೆ. ಹಿರಿಯ ನಟ ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ಧೀರಜ್, ಚಿದಂಬರ, ಸೂರ್ಯ ಕುಂದಾಪುರ, ದೀಕ್ಷಿತ್ ಅಂಡಿಂಜೆ, ಚೇತನ್ ರೈ ಮಾಣಿ, ಮೋಹನ್ ಶೇಣಿ ತಾರಾಂಗಣದಲ್ಲಿ ಇದ್ದಾರೆ. ಶಿವಕುಮಾರ್ ನಿರ್ಮಾಪಕರಾಗಿದ್ದು, ಶರತ್ ಕುಮಾರ್, ಪ್ರಶಾಂತ್ ಕೋಟ್ಯಾನ್‌, ಸೆಲ್ವರಾಜ್ ಸಹ ನಿರ್ಮಾಪಕರಾಗಿದ್ದಾರೆ’ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಜ್ಞೇಶ್ ಶೆಟ್ಟಿ, ನಟಿ ಸ್ವಸ್ತಿಕಾ ಪೂಜಾರಿ, ಛಾಯಾಗ್ರಾಹಕ ಸಂತೋಷ್ ಆಚಾರ್ಯ, ದೀಕ್ಷಿತ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.