ADVERTISEMENT

ಕಲಾವಿದರಿಗೆ ನೆರವು: ಅರ್ಜಿ ಸಲ್ಲಿಕೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:39 IST
Last Updated 27 ಮೇ 2021, 21:39 IST

ಬೆಂಗಳೂರು: ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರು ತಲಾ ₹ 3 ಸಾವಿರ ನೆರವು ಪಡೆಯಲು ಸೇವಾಸಿಂಧು ಫೋರ್ಟಲ್‌ನಲ್ಲಿ ಮೇ 28ರಿಂದ ಜೂ.5ರೊಳಗೆ ಅರ್ಜಿಸಲ್ಲಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

ಕೋವಿಡ್ ಎರಡನೇ ಅಲೆ ಹಾಗೂ ಲಾಕ್‌ಡೌನ್ ಕಾರಣ ಸರ್ಕಾರವು ಕಲಾವಿದರಿಗೆ ತಲಾ ₹ 3 ಸಾವಿರ ನೆರವು ಘೋಷಿಸಿದೆ.

‘ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲ ಪ್ರಕಾರದ ಕಲಾವಿದರು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕಲಾವಿದರು ವೃತ್ತಿನಿರತರಾಗಿದ್ದು, 35 ವರ್ಷ ಮೇಲ್ಪಟ್ಟವರಾಗಿರಬೇಕು. ಕನಿಷ್ಠ 10 ವರ್ಷಗಳ ಕಲಾ ಸೇವೆ ಮಾಡಿರಬೇಕು. ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು. ಸರ್ಕಾರಿ ನೌಕರಿಯಲ್ಲಿ ಇರಕೂಡದು. 2020–21ನೇ ಸಾಲಿನ ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಧನಸಹಾಯ ಪಡೆದಿರಬಾರದು’ ಎಂದು ಇಲಾಖೆ ಸೂಚಿಸಿದೆ.

ADVERTISEMENT

‘ಅರ್ಹ ಕಲಾವಿದರು ತಮ್ಮ ವಿಳಾಸ, ಕಲಾ ಪ್ರಕಾರ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ ಸೇರಿದಂತೆ ವಿವಿಧ ಮಾಹಿತಿಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ನಮೂದಿಸಬೇಕು’ ಎಂದು ತಿಳಿಸಲಾಗಿದೆ.

₹ 4.82 ಕೋಟಿ ಮಂಜೂರು: ‘ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ತಲಾ ಮೂರು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲು ₹ 482.85 ಲಕ್ಷ ಹಣವನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದ್ದು, ರಾಜ್ಯದ 16,095 ಬಡ ಕಲಾವಿದರು ಈ ಸೌಲಭ್ಯವನ್ನು ಪಡೆಯಲಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

‘ಪ್ರತಿ ಜಿಲ್ಲೆಯಲ್ಲೂ ಇಲಾಖೆಯ ಸಹಾಯಕ ನಿರ್ದೇಶಕರನ್ನು ಒಳಗೊಂಡ ಐದು ಜನರ ಸಮಿತಿಯು ಅರ್ಹ ಕಲಾವಿದರನ್ನು ಆಯ್ಕೆ ಮಾಡಿ, ಕೇಂದ್ರ ಕಚೇರಿಗೆ ಕಳುಹಿಸುತ್ತದೆ. ನಂತರ ಕೇಂದ್ರ ಕಚೇರಿಯಿಂದ ಕಲಾವಿದರ ಬ್ಯಾಂಕ್ ಖಾತೆಗೆ ನೇರವಾಗಿ ಆರ್‌ಟಿಜಿಎಸ್ ಮೂಲಕ ನೆರವಿನ ಮೊತ್ತವನ್ನು ಜಮಾ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.