ADVERTISEMENT

ಅಲುಗಾಡುತ್ತಿದೆ ಅಕಾಡೆಮಿ ಅಧ್ಯಕ್ಷರ ಕುರ್ಚಿ

ಅವಧಿ ಪೂರ್ಣಗೊಳ್ಳುವ ಮುನ್ನವೇ ಹೊಸಬರ ನೇಮಕ ಸಾಧ್ಯತೆ

ವರುಣ ಹೆಗಡೆ
Published 28 ಜುಲೈ 2019, 20:13 IST
Last Updated 28 ಜುಲೈ 2019, 20:13 IST
ಜೆ. ಲೋಕೇಶ್, ವಸುಂಧರಾ ಭೂಪತಿ
ಜೆ. ಲೋಕೇಶ್, ವಸುಂಧರಾ ಭೂಪತಿ   

ಬೆಂಗಳೂರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬನ್ನಲ್ಲೇ ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಕುರ್ಚಿ ಅಲುಗಾಡಲು ಆರಂಭಿಸಿದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅವರು ರಾಜೀನಾಮೆ ಇಂಗಿತ ವ್ಯಕ್ತಪಡಿಸಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಾಂಸ್ಕೃತಿಕ ಕೇಂದ್ರಗಳಲ್ಲಿ ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕವಾದ13 ಅಕಾಡೆಮಿಗಳು ಹಾಗೂ 3 ಪ್ರಾಧಿಕಾರದ ಅಧ್ಯಕ್ಷರು ಮುಂದುವರೆಯುತ್ತಾರೆಯೇ ಎಂಬ ಚರ್ಚೆ ಸಾಂಸ್ಕೃತಿಕ ವಲಯದಲ್ಲಿ ಇದೀಗ ಮುಂಚೂಣಿಗೆ ಬಂದಿದೆ. ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಅವಧಿಯು 3ವರ್ಷವಾಗಿದ್ದರೂ ಸಹ ಈ ಹಿಂದಿನ ಸರ್ಕಾರಗಳು ನೇಮಕಾತಿ ಪತ್ರದಲ್ಲಿ ಮುಂದಿನ ಆದೇಶದವರೆಗೆ ಅಧಿಕಾರದಲ್ಲಿ ಇರುತ್ತಾರೆ ಎಂದು ನಮೂದಿಸಿದೆ.

‘ಈ ಹಿಂದೆ ಬಿಜೆಪಿ ಸರ್ಕಾರ ಅಕಾಡೆಮಿ ಹಾಗೂ ಪ್ರಾಧಿಕಾರದ ಸದಸ್ಯರ ರಾಜೀನಾಮೆ ಕೇಳಿರಲಿಲ್ಲ. ಮೂರು ವರ್ಷದ ಅಧಿಕಾರಾವಧಿ ಮುಗಿದ ಬಳಿಕವೇ ಹೊಸಬರನ್ನು ನೇಮಕ ಮಾಡಿತ್ತು. ಆದರೆ, ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಅಧ್ಯಕ್ಷರಿಂದ ರಾಜೀನಾಮೆ ಪಡೆದು, ಆರು ತಿಂಗಳ ಬಳಿಕ ಹೊಸಬರನ್ನು ನೇಮಕ ಮಾಡಿತ್ತು. ಇದರಿಂದ ಲಲಿತಕಲಾ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಅಧ್ಯಕ್ಷರು ಕೋರ್ಟ್‌ ಮೆಟ್ಟಿಲೇರಿದ್ದರು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಅಕಾಡೆಮಿಗಳು ರಾಜಕಿಯೇತರವಾಗಿ ನಡೆದುಕೊಳ್ಳಬೇಕು. ಅಧ್ಯಕ್ಷರು ಪಕ್ಷಾತೀತವಾಗಿ ಕಲೆ, ಸಾಹಿತ್ಯದ ಸೇವೆಯನ್ನು ಮಾಡಬೇಕಾಗುತ್ತದೆ. ಎಲ್ಲಾ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡಲು ಸರ್ಕಾರಕ್ಕೆ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ರಾಜೀನಾಮೆ ನೀಡುವುದಿಲ್ಲ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಬಯಲಾಟ ಅಕಾಡೆಮಿ ಹಾಗೂ ಲಲಿತಕಲಾ ಅಕಾಡೆಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಅವಧಿ ಎರಡು ಹಾಗೂ ಎರಡಕ್ಕಿಂತ ಹೆಚ್ಚು ವರ್ಷವಾಗಿದೆ.

‘ನಾವು ಯಾವುದೇ ಪಕ್ಷದ ಪರವಾಗಿ ಕಾರ್ಯ ಕೈಗೊಂಡಿಲ್ಲ. ಕಲೆ ಹಾಗೂ ಸಾಹಿತ್ಯದ ಉಳಿವಿಗೆ ಶ್ರಮಿಸುತ್ತಿದ್ದು, ಅಧಿಕಾರದಲ್ಲಿಯೇ ಮುಂದುವರೆಯುತ್ತೇವೆ. ಸರ್ಕಾರ ನಮ್ಮನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಅದಕ್ಕೆ ಬದ್ಧರಾಗಿರುತ್ತೇವೆ’ ಎನ್ನುವುದು ಬಹುತೇಕ ಎಲ್ಲಾ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರ ಅಭಿಮತವಾಗಿದೆ.

‘ಈಗ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 30ರಿಂದ 40 ಪುಸ್ತಕದ ಅನುವಾದ ನಡೆಯುತ್ತಿದೆ. ನಾನು ಮಧ್ಯದಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಯೋಜನೆಗಳು ಸ್ಥಗಿತವಾಗುವ ಸಾಧ್ಯತೆಯಿದೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿಯಿದ್ದು, ಬೇಜವಾಬ್ದಾರಿಯಿಂದ ರಾಜೀನಾಮೆ ನೀಡುವುದಿಲ್ಲ. ಹೊಸ ಸರ್ಕಾರ ಕೆಳಗಿಳಿಯಿರಿ ಎಂದು ಆದೇಶ ಹೊರಡಿಸಿದರೆ ಖುಷಿಯಿಂದ ಪಾಲಿಸುತ್ತೇನೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರುಳಸಿದ್ದಪ್ಪ ತಿಳಿಸಿದರು.

‘ನಾವು ಪಕ್ಷಾತೀತವಾಗಿ ಯೋಚನೆ ಮಾಡುತ್ತೇವೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಕ ಆಗಿದ್ದು, ಮೈತ್ರಿ ಸರ್ಕಾರ ನಮ್ಮನ್ನು ಮುಂದುವರೆಸಿತು. ಯಾವುದೇ ಸರ್ಕಾರ ಬಂದರೂ ನಾವು ಕಲಾ ಸೇವೆ ಮಾಡುತ್ತೇವೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷಟಾಕಪ್ಪ ಕಣ್ಣೂರು ಅವರು ಹೇಳಿದರು.

**

ನಮಗೆ ಸಾಹಿತ್ಯ ಸೇವೆಗೆ ಒಂದು ಅವಕಾಶ ಸಿಕ್ಕಿದ್ದು, ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ರಾಜೀನಾಮೆಯಿಂದ ಯೋಜನೆಗಳು ಹಳ್ಳ ಹಿಡಿಯುವ ಸಾಧ್ಯತೆ ಇದೆ.
-ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ

**

ರಂಗಭೂಮಿ ಕಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವೆ. ಸರ್ಕಾರ ಲಿಖಿತ ರೂಪದಲ್ಲಿ ರಾಜೀನಾಮೆ ಕೇಳಿದರೆ ಕೋರ್ಟ್‌ ಮೆಟ್ಟಿಲೇರುತ್ತೇನೆ.
-ಜೆ. ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.