ADVERTISEMENT

ಅಕಾಡೆಮಿಗಳಿಗೆ ಆಡಳಿತಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 15:50 IST
Last Updated 18 ಅಕ್ಟೋಬರ್ 2022, 15:50 IST
ವಿ. ಸುನಿಲ್ ಕುಮಾರ್
ವಿ. ಸುನಿಲ್ ಕುಮಾರ್   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಅಂತ್ಯಗೊಂಡಿದ್ದರಿಂದ ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ಇದೇ 15ರಂದು ವಿವಿಧ ಅಕಾಡೆಮಿಗಳ ಕಾರ್ಯಕಾರಿ ಸಮಿತಿಗಳು 3 ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿವೆ. ಆದ್ದರಿಂದ ಹೊಸದಾಗಿ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವವರೆಗೆ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಗಳಿಗೆ ಬಲವಂತರಾವ್ ಪಾಟೀಲ್ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗಳಿಗೆ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅಶೋಕ್ ಚಲವಾದಿ, ಕರ್ನಾಟಕ ಬಯಲಾಟ ಅಕಾಡೆಮಿಗೆ ಬಸವರಾಜ್ ಹೂಗಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿಗೆ ಬನಶಂಕರಿ ಅಂಗಡಿ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಬಿ.ವಿ. ವಸಂತಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ. ಭೀಮಸೇನ್ ಆರ್. ಹಾಗೂ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿದ್ದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಸದಸ್ಯರನ್ನಾಗಿ ಮುಂದುವರಿಸಲಾಗಿದೆ.

ಬಯಲಾಟ, ಯಕ್ಷಗಾನ: ಅಧ್ಯಕ್ಷರ ಅವಧಿಯೂ ಮುಕ್ತಾಯ
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆಮಣಕಿಅವರನ್ನು ಸರ್ಕಾರ 2022ರ ಜನವರಿಯಲ್ಲಿ ನೇಮಕ ಮಾಡಿತ್ತು.ಪ್ರೊ.ಎಂ.ಎ. ಹೆಗಡೆ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರನ್ನು ನೇಮಿಸಲಾಗಿತ್ತು. ವರ್ಷ ಕಳೆಯುವುದರೊಳಗೆಯೇ ಅವರ ಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಅದೇ ರೀತಿ,ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಹುಬ್ಬಳ್ಳಿಯ ಅಜಿತ್ ನಾಗಪ್ಪ ಬಸಾಪುರ ಅವರನ್ನು 2022ರ ಆಗಸ್ಟ್ ತಿಂಗಳಲ್ಲಿ ನೇಮಕ ಮಾಡಿತ್ತು. ಈ ವೇಳೆ ನಾಟಕ, ಜಾನಪದ ಸೇರಿ ವಿವಿಧ ಅಕಾಡೆಮಿಗಳಿಗೆ ಸದಸ್ಯರನ್ನೂ ನೇಮಕ ಮಾಡಲಾಗಿತ್ತು. ಆ ನೇಮಕಾತಿಯೂ ಈಗ ರದ್ದಾಗಿದೆ.

ಕನ್ನಡ ಪ್ರಾಧಿಕಾರಕ್ಕೆ ಸಚಿವರೇ ಅಧ್ಯಕ್ಷರು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ಅಧಿಕಾರವಧಿಯು 2022ರ ಅ.14ರಂದು ಮುಕ್ತಾಯಗೊಂಡಿದೆ. ಹೊಸ ಅಧ್ಯಕ್ಷರ ನೇಮಕದವರೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.