ADVERTISEMENT

ಕಲಾವಿದರ ಕೈಸೇರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಮಾಸಾಶನ’

ಮೂರು ತಿಂಗಳಿಂದ ಅಲ್ಪಧನಕ್ಕೆ ನಿರಂತರ ಅಲೆದಾಟ

ವರುಣ ಹೆಗಡೆ
Published 16 ಜೂನ್ 2025, 0:37 IST
Last Updated 16 ಜೂನ್ 2025, 0:37 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿದ್ದ ‘ಮಾಸಾಶನ’ ಮೂರು ತಿಂಗಳಿಂದ ಕಲಾವಿದರ ಕೈಸೇರಿಲ್ಲ. ಇದರಿಂದಾಗಿ ಇಲಾಖೆ ನೀಡುತ್ತಿದ್ದ ಅಲ್ಪ ಧನವನ್ನೇ ಅವಲಂಬಿಸಿದ್ದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಮೂರು ತಿಂಗಳಿಂದ ಈ ಆರ್ಥಿಕ ನೆರವು ಕಲಾವಿದರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಇದರಿಂದಾಗಿ ಕಲಾವಿದರು, ಸಾಹಿತಿಗಳು ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆದಾಡು ತ್ತಿದ್ದಾರೆ.

ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಮಾಸಾಶನ ಪಡೆಯುತ್ತಿದ್ದಾರೆ. ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಲಲಿತ ಕಲೆ ಸೇರಿ ವಿವಿಧ ಕಲಾ ಪ್ರಕಾರಗಳಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ, ಕಷ್ಟದ ಸ್ಥಿತಿಯಲ್ಲಿರುವ ಕಲಾವಿದರು ಹಾಗೂ ಸಾಹಿತಿಗಳಿಗೆ ಇಲಾಖೆ ಮಾಸಾಶನ ನೀಡುತ್ತಿದೆ. ಫಲಾನುಭವಿಗಳಿಗೆ 58 ವರ್ಷ ಆಗಿರಬೇಕು. ಆಯ್ಕೆಯಾದ ಕಲಾವಿದರಿಗೆ ಮಾಸಿಕ ₹2 ಸಾವಿರ ‘ಮಾಸಾಶನ’ ನೀಡಲಾಗುತ್ತಿತ್ತು.

ADVERTISEMENT

‘ಮಾಸಾಶನ’ಕ್ಕೆ ಆಯ್ಕೆಯಾಗಿರುವ ಕಲಾವಿದರು ಹಾಗೂ ಸಾಹಿತಿಗಳಲ್ಲಿ ಕೆಲವರಿಗೆ ಮಾರ್ಚ್‌ ತಿಂಗಳ ಹಣ ಸಂದಾಯವಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳ ಹಣ ಪಾವತಿಯಾಗಬೇಕಿದೆ. ಇನ್ನೂ ಕೆಲವರಿಗೆ ಮಾರ್ಚ್ ತಿಂಗಳಿಂದಲೇ ಮಾಸಾಶನ ದೊರೆತಿಲ್ಲ. ಜೂನ್ ತಿಂಗಳ ಎರಡನೇ ವಾರ ಕಳೆದರೂ ಮಾಸಾಶನ ಬರದಿರುವುದು ಈಗ ಆತಂಕಕ್ಕೆ ಕಾರಣವಾಗಿದೆ. 

ದೊರೆಯದ ಹೆಚ್ಚಳ: ಮಾಸಾಶನವನ್ನು ₹5 ಸಾವಿರಕ್ಕೆ ಹೆಚ್ಚಳ ಮಾಡಬೇಕೆಂದು ಈ ಹಿಂದೆ ಕಲಾವಿದರ ನಿಯೋಗ ಇಲಾಖೆಗೆ ಮನವಿ ಸಲ್ಲಿಸಿ, ಆಗ್ರಹಿಸಿತ್ತು. ಇದಕ್ಕೆ ಮಣಿದ ಇಲಾಖೆ, ಮಾಸಾಶನವನ್ನು ₹3 ಸಾವಿರಕ್ಕೆ ಏರಿಸಲು ನಿರ್ಧರಿಸಿ, ಈ ಬಗ್ಗೆ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿದ್ದರೂ ಅನುಮೋದನೆ ದೊರೆತಿರಲಿಲ್ಲ. ಕಲಾವಿದರ ನಿರಂತರ ಆಗ್ರಹಕ್ಕೆ ಮಣಿದ ಸರ್ಕಾರ, ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ₹2,500ಕ್ಕೆ ಹೆಚ್ಚಿಸುವುದಾಗಿ ಘೋಷಿಸಿತ್ತು. ಆದರೆ, ಈ ಹೆಚ್ಚಳವೂ ಕಲಾವಿದರಿಗೆ ಇನ್ನೂ ದೊರೆತಿಲ್ಲ. 

‘ಎರಡು ತಿಂಗಳಿಂದ ಮಾಸಾಶನ ದೊರೆತಿಲ್ಲ. ಯಾವಾಗ ಬರುತ್ತದೆ ತಿಳಿದಿಲ್ಲ. ಔಷಧ ಖರೀದಿಯಂತಹ ವೆಚ್ಚಗಳನ್ನು ಪಾವತಿಸಲು ಈ ಹಣ ಸಹಕಾರಿಯಾಗಿತ್ತು. ಈಗ ಕುಟುಂಬದ ಸದಸ್ಯರನ್ನು ಅವಲಂಬಿಸಬೇಕಾಗಿದೆ’ ಎಂದು ದೇವನಹಳ್ಳಿಯ ಜಾನಪದ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

––––

ಮಾಸಾಶನದ ಅನುದಾನಕ್ಕೆ ಸಂಬಂಧಿಸಿದಂತೆ ಕಳೆದ ವಾರವೇ ಆದೇಶ ಹೊರಡಿಸಿ ಖಜಾನೆಗೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಮಾಸಾಶನ ಬಿಡುಗಡೆಯಾಗಲಿದೆ

-ಗಾಯಿತ್ರಿ ಕೆ.ಎಂ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ

ಅಲ್ಪ ಧನಕ್ಕೂ ಕಲಾವಿದರು ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ತಿಂಗಳಿಂದ ಮಾಸಾಶನ ಬಂದಿಲ್ಲ. ಯಾವಾಗ ಬರುತ್ತದೆ ಎಂಬ ಖಚಿತತೆಯೂ ಇಲ್ಲ

-ವಂದನಾ ಗಂಗಾವತಿ ಕಲಾವಿದೆ

ಕನ್ನಡ ಭವನಕ್ಕೆ ಅಲೆದಾಟ

ಮಾಸಾಶನ ಪ್ರಾಯೋಜಿತ ಕಾರ್ಯಕ್ರಮಗಳ ಹಣ ಪಾವತಿ ವೈದ್ಯಕೀಯ ಸೌಲಭ್ಯಕ್ಕೆ ಗುರುತಿನ ಚೀಟಿ ಸೇರಿ ವಿವಿಧ ಕಾರ್ಯಗಳ ಸಂಬಂಧ ಕನ್ನಡ ಭವನಕ್ಕೆ ಭೇಟಿ ನೀಡುವ ಕಲಾವಿದರು ಹಾಗೂ ಸಾಹಿತಿಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನಿರ್ದೇಶಕರ ಭೇಟಿಗೆ ಸಂದರ್ಶನ ಸಮಯ ಗೊತ್ತುಪಡಿಸಲಾಗಿದೆ. ಈ ಅವಧಿಯಲ್ಲಿಯೂ ಸಭೆ ಹಾಗೂ ವಿವಿಧ ಕಾರಣ ನೀಡಿ ಭೇಟಿಗೆ ನಿರಾಕರಿಸಲಾಗುತ್ತಿದೆ ಎಂದು ಕಲಾವಿದರು ದೂರಿದ್ದಾರೆ.  ‘ಸಂಕಷ್ಟಗಳನ್ನು ಇಲಾಖೆ ನಿರ್ದೇಶಕರಿಗೆ ಮನವರಿಕೆ ಮಾಡಿಸಲು ಅವರ ಭೇಟಿಯೇ ಸಾಧ್ಯವಾಗುತ್ತಿಲ್ಲ. ದೂರದ ಊರುಗಳಿಂದ ಬರುವ ಕಲಾವಿದರು ಸಂಜೆವರೆಗೂ ಕಾಯ್ದು ಮರಳುವ ಸ್ಥಿತಿ ಇದೆ. ಸಮಸ್ಯೆಗಳನ್ನು ನಾವು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತಿಳಿಯದಾಗಿದೆ’ ಎಂದು ಕಲಾವಿದ ಜಯಸಿಂಹ ಎಸ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.