ADVERTISEMENT

ಕನ್ನಡ–ಸಂಸ್ಕೃತಿ: ಆರ್ಥಿಕ ನೆರವಿಗೆ ಸರ್ಕಾರದಿಂದ ಹಲವು ನಿರ್ಬಂಧ

ಸಂಘ–ಸಂಸ್ಥೆಗಳಿಗೆ ಗರಿಷ್ಠ ₹ 2 ಲಕ್ಷದ ಮಿತಿ

ವರುಣ ಹೆಗಡೆ
Published 20 ಜುಲೈ 2022, 19:15 IST
Last Updated 20 ಜುಲೈ 2022, 19:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕನ್ನಡ ಸಂಸ್ಕೃತಿಯನ್ನು ಕಟ್ಟಿ, ಬೆಳೆಸುವ ಕಾಯಕದಲ್ಲಿ ನಿರತ ವಾಗಿರುವ ಸಂಘ–ಸಂಸ್ಥೆಗಳಿಗೆ ನೀಡುವ ಅಲ್ಪ ಪ್ರಮಾಣದ ಆರ್ಥಿಕ ನೆರವಿಗೆ ಸರ್ಕಾರ ಹಲವು ನಿರ್ಬಂಧ ವಿಧಿಸಿದೆ.

ಪ್ರತಿವರ್ಷವೂ ಆರ್ಥಿಕ ನೆರವಿನ ಅಸಮಾನತೆ ಬಗ್ಗೆ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘ–ಸಂಸ್ಥೆಗಳ ಮುಖ್ಯಸ್ಥರಿಂದ ಆಕ್ಷೇಪಗಳು ವ್ಯಕ್ತವಾಗುತ್ತಿದ್ದವು. ‘ಕೆಲ ಸಂಘ–ಸಂಸ್ಥೆಗಳು ಮುಖ್ಯಮಂತ್ರಿ, ಸಚಿವರ ಶಿಫಾರಸು ಬಳಸಿ, ಪೂರಕ ದಾಖಲೆ ಸಲ್ಲಿಸದೆ ನಿಯಮ ಮೀರಿ ಅನುದಾನ ಪಡೆದುಕೊಂಡಿವೆ’ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಧನಸಹಾಯಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆಯ ಹೆಸರಿನಲ್ಲಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿ, ಕೆಲವೊಂದು ನಿರ್ಬಂಧಗಳನ್ನು ಇಲಾಖೆಯು ವಿಧಿಸಿದೆ. ಇದಕ್ಕೆ ಆರಂಭಿಕ ಹಂತದಲ್ಲೇ ಸಾಂಸ್ಕೃತಿಕ ವಲಯದ ಪ್ರಮುಖರಿಂದ ಬಾರಿ ಅಸಮಾಧಾನ ವ್ಯಕ್ತವಾಗಿದೆ.

ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಮೂರು ವರ್ಷ ಸತತವಾಗಿ ಅನುದಾನ ಪಡೆಯುವ ಸಂಘ–ಸಂಸ್ಥೆಗಳು ನಾಲ್ಕನೇ ವರ್ಷ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸುವಂತಿಲ್ಲ. ಅಂತೆಯೇ, ಹೊಸದಾಗಿ ನೋಂದಣಿಯಾದ ಸಂಘ–ಸಂಸ್ಥೆಗಳು ಸರ್ಕಾರದ ಧನಸಹಾಯಕ್ಕೆ ಮೂರು ವರ್ಷಗಳವರೆಗೆ ಅರ್ಜಿಸಲ್ಲಿಸುವಂತಿಲ್ಲ. ನೆರವು ಪಡೆಯಲು ಆಯ್ಕೆಯಾದ ಸಂಘ–ಸಂಸ್ಥೆಯೊಂದಕ್ಕೆ ಅನುದಾನದ ಗರಿಷ್ಠ ಮಿತಿಯನ್ನೂ ₹ 2 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಈ ನಿರ್ಬಂಧಗಳು ಕಲಾವಿದರು, ಸಂಘ–ಸಂಸ್ಥೆಗಳ ಮುಖ್ಯಸ್ಥರ ಅಸಮಾಧಾನಕ್ಕೆ ಕಾರಣವಾಗಿವೆ.

ADVERTISEMENT

ಕಾರ್ಯಕ್ರಮ ಕಷ್ಟ: ಜಿಲ್ಲಾ ಹಂತದಲ್ಲಿ ಅನುಷ್ಠಾನಾಧಿಕಾರಿಗಳಾದ ಸಹಾಯಕ ನಿರ್ದೇಶಕರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವಂತೆ ನೋಡಿಕೊಳ್ಳಲು ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕ್ರಿಯಾಯೋಜನೆಗೆ ಅವರ ಅನುಮೋದನೆ ಪಡೆದು, ಕಾರ್ಯಕ್ರಮ ಏರ್ಪಡಿಸಬೇಕಿದೆ. ಇದನ್ನೂ ಆಕ್ಷೇಪ ವ್ಯಕ್ತವಾಗಿವೆ.

‘ಪಾರದರ್ಶಕತೆಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಮಾರ್ಗಸೂಚಿ ಹೊರಡಿಸಲಾಗಿದೆ. ₹ 2 ಲಕ್ಷದಲ್ಲಿ ಹೇಗೆ ವರ್ಷಪೂರ್ತಿ ಕಾರ್ಯಕ್ರಮ ಮಾಡಲು ಸಾಧ್ಯ? ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುವ ಒಂದು ಕಾರ್ಯಕ್ರಮಕ್ಕೆ ಸರ್ಕಾರವೇ ₹ 25 ಲಕ್ಷ ವ್ಯಯಿಸಲಿದೆ. ಮೂರು ವರ್ಷಗಳ ಬಳಿಕ ಅನುದಾನ ನೀಡದಿದ್ದರೆ ಸಾಂಸ್ಕೃತಿಕ ಚಟುವಟಿಕೆ ಮುಂದುವರೆಸುವುದು ಹೇಗೆ’ ಎಂಬ ತಕರಾರುಗಳು ಕೇಳಿಬಂದಿವೆ.

‘ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಲಾಖೆಗೆ ಸಹಾಯಕ ನಿರ್ದೇಶಕರೇ ಇಲ್ಲ. ಇನ್ನೂ ಕೆಲವೆಡೆ ಕಲೆ, ಸಂಸ್ಕೃತಿ ಕುರಿತು ಆಸಕ್ತಿ ಇಲ್ಲದ ಅಧಿಕಾರಿಗಳಿದ್ದಾರೆ. ಹೀಗಿರುವಾಗ, ವಿಕೇಂದ್ರೀಕರಣದಿಂದ ಪಾರದರ್ಶಕತೆ ಹೇಗೆ ಬರಲಿದೆ? ಕಳೆದ ವರ್ಷ ಅನುದಾನ ₹ 2.5 ಲಕ್ಷಕ್ಕೆ ಸೀಮಿತವಾಗಿತ್ತು. ಕೆಲ ಸಂಸ್ಥೆಗಳಿಗೆ ಮುಖ್ಯಮಂತ್ರಿ, ಸಚಿವರ ಶಿಫಾರಸ್ಸಿನಂತೆ ಹೆಚ್ಚಿನ ಅನುದಾನ ಸಂದಾಯವಾಗಿದೆ’ ಎಂದು ಕಲಾವಿದ ಡಾ. ಜಯಸಿಂಹ ಅವರು ಬೇಸರ ವ್ಯಕ್ತಪಡಿಸಿದರು.

‘ಧನಸಹಾಯವೇ ಕಲೆಗೆ ಆಧಾರ’

‘ಧನಸಹಾಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮರೆಯಾಗಿದೆ. ಪರಿಷ್ಕೃತ ಮಾರ್ಗಸೂಚಿಯಿಂದ ವ್ಯವಸ್ಥೆ ಇನ್ನಷ್ಟು ಹದಗೆಡಲಿದೆ.ವ್ಯಕ್ತಿಯೊಬ್ಬರ ಹಸ್ತಕ್ಷೇಪದಿಂದ ಇಲಾಖೆಯ ಯೋಜನೆ, ಧನಸಹಾಯ ಕೆಲವರಿಗೆ ಮಾತ್ರ ತಲುಪುತ್ತಿದೆ. ವ್ಯವಸ್ಥೆ ಸುಧಾರಣೆಯಾಗದಿದ್ದಲ್ಲಿ ಸಂಘ–ಸಂಸ್ಥೆಗಳೇ ಮರೆಯಾಗಲಿವೆ. ಹಳೆಯ ಸಂಸ್ಥೆಗಳಿಗೆ ಅನುದಾನ ನೀಡುತ್ತಿಲ್ಲ. ಹೆಸರೇ ಕೇಳದ ಸಂಸ್ಥೆಗಳಿಗೆ ಸಿಗುತ್ತಿದೆ’ ಎಂದು ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

‘ಮೂರು ವರ್ಷದ ಬಳಿಕ ಧನಸಹಾಯ ನಿಲ್ಲಿಸಿದರೆ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡುಹೋಗುವ ಶಕ್ತಿ ಇರುವುದಿಲ್ಲ. ಉತ್ತಮವಾಗಿ ಕಾರ್ಯಕ್ರಮ ಮಾಡಿದ್ದ ಸಂದರ್ಭದಲ್ಲಿ ಹಿಂದೆ ₹ 10 ಲಕ್ಷದವರೆಗೂ ಅನುದಾನ ಬರುತ್ತಿತ್ತು. ಗರಿಷ್ಠ ₹ 2 ಲಕ್ಷ ಅನುದಾನ ನೀಡಿದರೆ ಕಾರ್ಯಕ್ರಮ ಮಾಡಲು ಸಾಧ್ಯವೆ’ ಎಂದು ನೂಪುರ ಫೈನ್‌ ಆರ್ಟ್ಸ್‌ ಅಕಾಡೆಮಿಯ ಸಂಸ್ಥಾಪನಾ ಕಾರ್ಯದರ್ಶಿ ರೂಪಾ ರಾಜೇಶ್ ಪ್ರಶ್ನಿಸಿದರು.

‘ಇಲಾಖೆಯೇ ನಡೆಸುವ ಉತ್ಸವಗಳಿಗೆ ₹ 70 ಲಕ್ಷದಿಂದ ₹ 80 ಲಕ್ಷ ಖರ್ಚು ಮಾಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೆ ₹ 20 ಲಕ್ಷದವರೆಗೂ ವೆಚ್ಚ ಆಗಲಿದೆ. ಹೀಗಿರುವಾಗ ಸಂಘ–ಸಂಸ್ಥೆಗಳು ₹ 2 ಲಕ್ಷದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಮಾಡಲು ಸಾಧ್ಯವೆ? ಅನುಮೋದನೆ ನೀಡುವ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಸಾಂಸ್ಕೃತಿಕ ಜ್ಞಾನವಿದೆಯೆ? ಕಲೆ, ಸಂಸ್ಕೃತಿಗೆ ಪ್ರೋತ್ಸಾಹಿಸುವ ಇಚ್ಛಾಶಕ್ತಿ ಇಲಾಖೆಯ ಅಧಿಕಾರಿಗಳಿಗಿಲ್ಲ’ ಎಂದು ಹೊಂಬಾಳೆ ಸಂಸ್ಥೆಯ ಎಚ್.ಫಲ್ಗುಣ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.