ADVERTISEMENT

ಮದ್ರಸಾಗಳಲ್ಲಿ ಕನ್ನಡ ಕಲಿಕೆಗೆ ಕ್ರಮ: ಟಿ.ಎಸ್. ನಾಗಾಭರಣ ಭರವಸೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 16:34 IST
Last Updated 30 ಜೂನ್ 2021, 16:34 IST
ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಪದಾಧಿಕಾರಿಗಳು ಟಿ.ಎಸ್. ನಾಗಾಭರಣ ಅವರಿಗೆ ಮನವಿ ಸಲ್ಲಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಇದ್ದರು.
ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ಪದಾಧಿಕಾರಿಗಳು ಟಿ.ಎಸ್. ನಾಗಾಭರಣ ಅವರಿಗೆ ಮನವಿ ಸಲ್ಲಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಇದ್ದರು.   

ಬೆಂಗಳೂರು: ‘ಮಸೀದಿ, ಮದ್ರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸುವ ಜತೆಗೆ ಕನ್ನಡ ಸಂಸ್ಕೃತಿ ಶಿಬಿರ ನಡೆಸಲು ಕ್ರಮವಹಿಸಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.

ಕಲಿಕಾ ಕೇಂದ್ರ ಹಾಗೂ ಸಂಸ್ಕೃತಿ ಶಿಬಿರಕ್ಕೆ ಸಂಬಂಧಿಸಿದಂತೆ ‌ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯು ಪ್ರಾಧಿಕಾರಕ್ಕೆ ಬುಧವಾರ ಮನವಿ ಸಲ್ಲಿಸಿತು.

ಅಲ್‌ಫೈಝ್ ಟ್ರಸ್ಟ್, ಮಸ್ಜಿದ್‌ ತಾಹ, ಫಲಾಹೆ ದಾರೇನ್ ಎಜುಕೇಷನಲ್ ಸೋಷಿಯಲ್ ಚಾರಿಟಬಲ್ ಟ್ರಸ್ಟ್ ಹಾಗೂ ವೇದಿಕೆಯ ಪದಾಧಿಕಾರಿಗಳು ಟಿ.ಎಸ್. ನಾಗಾಭರಣ ಜತೆಗೆ ಸಭೆ ನಡೆಸಿ, ಮಸೀದಿ ಮತ್ತು ಮದ್ರಸಾಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಸಂಸ್ಕೃತಿ ಶಿಬಿರ ನಡೆಸಲು ಪ್ರಾಧಿಕಾರದ ಪ್ರಾಯೋಜಕತ್ವ ನೀಡುವಂತೆ ಮನವಿ ಮಾಡಿದರು.

ADVERTISEMENT

‘ನಮ್ಮಲ್ಲಿ ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾಗಿದ್ದರೆ ಅದು ಈಗಾಗಲೇ ತನ್ನನ್ನು ತಾನು ಕಳೆದುಕೊಳ್ಳುತ್ತಿತ್ತು. ಆದರೆ, ಅದು ವ್ಯವಹಾರಕ್ಕೆ ಮೀರಿದ ಆತ್ಮೀಯತೆ, ಸೌಹಾರ್ದ ಹಾಗೂ ಬದುಕನ್ನು ಕಟ್ಟಿಕೊಡುವಂತದ್ದು’ ಎಂದು ನಾಗಾಭರಣ ತಿಳಿಸಿದರು.

ವೇದಿಕೆಯ ಅಧ್ಯಕ್ಷ ಸಮಿಉಲ್ಲಾ ಖಾನ್ ಮಾತನಾಡಿ, ‌‘ಪ್ರೊ. ಬರಗೂರು ರಾಮಚಂದ್ರಪ್ಪ, ’ಮುಖ್ಯಮಂತ್ರಿ‘ ಚಂದ್ರು ಅಧ್ಯಕ್ಷರಾಗಿದ್ದ ವೇಳೆ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಮದ್ರಸಾ ಮತ್ತು ಮಸೀದಿಗಳಲ್ಲಿ ಕನ್ನಡ ಕಲಿಕಾ ಹಾಗೂ ಕನ್ನಡ ಸಂಸ್ಕೃತಿ ಶಿಬಿರಗಳನ್ನು ಆಯೋಜಿಸಲಾಗಿತ್ತು. ಈಗ ಮತ್ತೆ ಆಯೋಜಿಸಲು ಪ್ರಾಧಿಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.