ADVERTISEMENT

ಗಡಿ ಗ್ರಾಮಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ: ಸೋಮಶೇಖರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 16:03 IST
Last Updated 2 ಡಿಸೆಂಬರ್ 2022, 16:03 IST
ಎರಡು ವರ್ಷಗಳ ಸಾಧನೆಯ ವರದಿಯನ್ನು ಸಿ. ಸೋಮಶೇಖರ ಬಿಡುಗಡೆ ಮಾಡಿದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಇದ್ದಾರೆ. –ಪ್ರಜಾವಾಣಿ ವಾರ್ತೆ
ಎರಡು ವರ್ಷಗಳ ಸಾಧನೆಯ ವರದಿಯನ್ನು ಸಿ. ಸೋಮಶೇಖರ ಬಿಡುಗಡೆ ಮಾಡಿದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಇದ್ದಾರೆ. –ಪ್ರಜಾವಾಣಿ ವಾರ್ತೆ   

ಬೆಂಗಳೂರು: ‘ರಾಜ್ಯದ ಆಯ್ದ 8 ವಿಶ್ವವಿದ್ಯಾಲಯಗಳ ಮೂಲಕ ಗಡಿ ಗ್ರಾಮಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. 6 ತಿಂಗಳಲ್ಲಿ ಸಮಗ್ರ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎರಡು ವರ್ಷಗಳ ಸಾಧನೆ ವರದಿ ಬಿಡುಗಡೆ ಮಾಡಿದ ಅವರು, ‘ಗಡಿ ಭಾಗದ ಹಳ್ಳಿಗಳಲ್ಲಿನ ಕನ್ನಡಿಗರ ಸ್ಥಿತಿಗತಿಯ ವೈಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಪ್ರಾಧಿಕಾರ ಕ್ರಮವಹಿಸಿದೆ. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯವು ಹಳ್ಳಿಗಳ ಸಮಗ್ರ ಸಮೀಕ್ಷೆ ಕೈಗೊಂಡಿದೆ. ಗಡಿ ಭಾಗದಲ್ಲಿ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಹಾಗೂ ಕನ್ನಡ ಮನಸ್ಸನ್ನು ಕಟ್ಟುವುದು ನಮ್ಮ ಮುಖ್ಯ ಉದ್ದೇಶ’ ಎಂದು ಹೇಳಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗಡಿ ಭಾಗದ ವಿವಿಧ 351 ಸಂಘ–ಸಂಸ್ಥೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ₹ 4 ಕೋಟಿ ಅನುದಾನವನ್ನು ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆ ಮಾಡಲಾಗಿದೆ. ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಲು ಕ್ರಮವಹಿಸಲಾಯಿತು. ಗಡಿನಾಡ ಕನ್ನಡಿಗ ಪ್ರಮಾಣಪತ್ರ, ‘ಗಡಿನಾಡ ಚೇತನ ಪ್ರಶಸ್ತಿ’ ಸ್ಥಾಪನೆ, ಹೊರ ರಾಜ್ಯಗಳಲ್ಲಿ ಕನ್ನಡ ಉತ್ಸವ ಸೇರಿ ವಿವಿಧ ಯೋಜನೆಗಳನ್ನು ಎರಡು ವರ್ಷದ ಅವಧಿಯಲ್ಲಿ ಕಾರ್ಯಗತ ಮಾಡಲಾಗಿದೆ’ ಎಂದರು.

ADVERTISEMENT

ಕನ್ನಡ ಭವನ ನಿರ್ಮಾಣ:‘ರಂಗಾಯಣದ ಸಹಯೋಗದಲ್ಲಿ ರಾಷ್ಟ್ರಭಕ್ತಿ ಮತ್ತು ನಾಡಪ್ರೀತಿ ಬಿಂಬಿಸುವ ನಾಟಕಗಳ ಪ್ರದರ್ಶನಕ್ಕೂ ಅನುದಾನ ಒದಗಿಸಲಾಗಿದೆ. ಕನ್ನಡ ಅಸ್ಮಿತೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕನ್ನಡ ಭವನ ನಿರ್ಮಿಸುವಂತಹ ವಿಶಿಷ್ಟ ಯೋಜನೆಗೆ ನಾಂದಿ ನಾಡಿದೆ. ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಕಾಸರಗೋಡಿನಲ್ಲಿ, ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಅಕ್ಕಲಕೋಟೆಯಲ್ಲಿ ಹಾಗೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ಘೋಷಿಸಿದೆ’ ಎಂದು ಹೇಳಿದರು.

‘ಕಾಸರಗೋಡಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುಟುಂಬ,ಅಕ್ಕಲಕೋಟೆಯಲ್ಲಿಜಯದೇವಿ ತಾಯಿ ಲಿಗಾಡೆ ಕುಟಂಬ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಸಮ್ಮತಿಸಿವೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಮೀನು ಒದಗಿಸುವಂತೆ ಅಲ್ಲಿನ ಮುಖ್ಯಮಂತ್ರಿಗೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಈ ಮೂರು ಕನ್ನಡ ಭವನಗಳು ನಿರ್ಮಾಣಗೊಂಡಲ್ಲಿ ಹೊರನಾಡಿನ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆ ದೊರೆಯಲಿದೆ’ ಎಂದರು.

‘ಮಕ್ಕಳ ಹೆಸರಲ್ಲಿ ಠೇವಣಿ’

‘ಕಾಸರಗೋಡು, ಜತ್ತ, ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರದಲ್ಲಿ ಕನ್ನಡದಲ್ಲಿ ವ್ಯಾಸಂಗ ಮಾಡುವ ಮಕ್ಕಳನ್ನು ಪ್ರೋತ್ಸಾಹಿಸಲು ತಲಾ ₹ 5 ಸಾವಿರ ಠೇವಣಿ ಇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 5 ಸಾವಿರ ಮಕ್ಕಳಿಗೆ ₹ 2.5 ಕೋಟಿ ಅನುದಾನ ಅಗತ್ಯವಿದೆ. ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಠೇವಣಿಯ ಹಣ ಮಕ್ಕಳಿಗೆ ದೊರೆಯುತ್ತದೆ. ಅನುದಾನ ದೊರೆತಲ್ಲಿ ಆ ಭಾಗದ ಕನ್ನಡ ಶಿಕ್ಷಕರಿಗೂ ಪ್ರೋತ್ಸಾಹಧನ ನೀಡುವ ಚಿಂತನೆಯಿದೆ’ ಎಂದು ಸಿ. ಸೋಮಶೇಖರ್ ಹೇಳಿದರು.

‘ಭಾಷಾ ಸಾಮರಸ್ಯ ಕರ್ನಾಟಕದ ವೈಶಿಷ್ಟ್ಯ. ನಾವು ಇಲ್ಲಿ ಕೊಂಕಣಿ ಅಕಾಡೆಮಿಗೆ ಅನುದಾನ ನೀಡುತ್ತಿದ್ದೇವೆ. ಅದೇ ರೀತಿ, ಗೋವಾದಲ್ಲಿ ಕನ್ನಡ ಅಕಾಡೆಮಿ ಮಾಡುವಂತೆ ಅಲ್ಲಿನ ಅಕಾಡೆಮಿಗೆ ಮನವಿ ಮಾಡಿಕೊಳ್ಳಲಾಗಿದೆ. ಸಂಸ್ಕೃತಿ, ಶಿಕ್ಷಣ, ಭಾಷಾ ಸಾಮರಸ್ಯಕ್ಕೆ ಆದ್ಯತೆ ನೀಡಲಾಗಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡಿದಲ್ಲಿ ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯ’ ಎಂಧರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.