ADVERTISEMENT

ಪ್ರಜಾವಾಣಿ ಪಾಡ್‌ಕಾಸ್ಟ್ 1 ಲಕ್ಷದ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 15:42 IST
Last Updated 21 ಅಕ್ಟೋಬರ್ 2020, 15:42 IST
ಪ್ರಜಾವಾಣಿಯ ಆನ್‌ಲೈನ್ ರೇಡಿಯೋ ಚಾನೆಲ್ (ಪಾಡ್‌ಕಾಸ್ಟ್) ಕನ್ನಡ ಧ್ವನಿ
ಪ್ರಜಾವಾಣಿಯ ಆನ್‌ಲೈನ್ ರೇಡಿಯೋ ಚಾನೆಲ್ (ಪಾಡ್‌ಕಾಸ್ಟ್) ಕನ್ನಡ ಧ್ವನಿ   

ಕನ್ನಡ ಪತ್ರಿಕಾ ಲೋಕದಲ್ಲೇ ಪ್ರಥಮ ಪ್ರಯೋಗ, ಪ್ರಜಾವಾಣಿಯ ಪಾಡ್‌ಕಾಸ್ಟ್ 'ಕನ್ನಡ ಧ್ವನಿ' ನಾಲ್ಕು ತಿಂಗಳಲ್ಲೇ 1 ಲಕ್ಷ ಕೇಳುಗರನ್ನು ತಲುಪಿದ್ದು, ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ.

ಪಾಡ್‌ಕಾಸ್ಟ್ ಚಾನೆಲ್ ಎಂಬುದು ಆನ್‌ಲೈನ್ ಮೂಲಕ ಲಭ್ಯವಾಗುವ ಆಡಿಯೋ ಪ್ರಸಾರ ಕೇಂದ್ರವಾಗಿದ್ದು, ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಪತ್ರಿಕಾ ಮಾಧ್ಯಮವೊಂದು ಜನರನ್ನು ತಲುಪುವ ಪ್ರಯತ್ನದಲ್ಲಿ ಹೊಸ ಮೈಲಿಗಲ್ಲು ಇದು.

'ಕನ್ನಡ ಧ್ವನಿ' ಕೇಂದ್ರದಲ್ಲಿ ದಿನಂಪ್ರತಿ ಸಂಪಾದಕೀಯ, ಪ್ರಚಲಿತ ಮುಂತಾದವುಗಳು ದಿನ ನಿತ್ಯದ ಆಗುಹೋಗುಗಳ ಮೇಲೆ ಬೆಳಕು ಚೆಲ್ಲಿ ಜನರ ಗಮನ ಸೆಳೆದರೆ ದಿನಕ್ಕೊಂದು ವಿಶೇಷ ಧ್ವನಿ ಸಂಚಿಕೆಗಳು ಎಲ್ಲ ವರ್ಗದ ಜನರ ಕಿವಿಗಳಿಗೆ ಮುದ ನೀಡುತ್ತಾ ಬಂದಿವೆ. ಇದರೊಂದಿಗೆ ವಿಶೇಷ ಸಂದರ್ಭಗಳಲ್ಲಿ, ಸಂಗೀತ, ಗಾಯನ ಕಾರ್ಯಕ್ರಮಗಳೂ ಮೂಡಿಬರುತ್ತಿವೆ.

ADVERTISEMENT

ಪ್ರತಿದಿನವೂ 'ದಿನದ ಸೂಕ್ತಿ' ಕೇಳುಗರಿಗೆ ಹೊಸ ಚೈತನ್ಯ ನೀಡುತ್ತದೆ. ಪ್ರತೀ ಭಾನುವಾರ ಕೇಳುಗರಿಗೆ ವೈದ್ಯಕೀಯ ವಿಚಾರಗಳನ್ನು ತಿಳಿಸಿಕೊಡುವ 'ವೈದ್ಯಮಿತ್ರ' ಹಾಗೂ ಸಾಹಿತ್ಯಾಭಿಮಾನಿ ಶ್ರೋತೃಗಳಿಗಾಗಿ 'ಕಥಾ ಸಾಗರ', ಪ್ರತೀ ಸೋಮವಾರ ಡಾ.ಬಸವರಾಜ್ ಸಾದರ, ಡಾ.ಕುಮಾರ ಕಣವಿ, ಕವಿತಾ ಸಾದರ ಅವರು ಪ್ರಸ್ತುತಪಡಿಸುವ ಶರಣರ ವಚನಗಳ ವಾಚನ, ಗಾಯನ ಮತ್ತು ಅರ್ಥ ವಿವರಣೆಯ ಸರಣಿ 'ವಚನ ವಾಣಿ' ಪ್ರಸಾರವಾಗುತ್ತದೆ.

ಪ್ರತೀ ಮಂಗಳವಾರ ಸುದ್ದಿ ಸ್ವಾರಸ್ಯ, ಪ್ರತೀ ಬುಧವಾರ ಹಣಕಾಸು-ವಹಿವಾಟುಗಳ ಬಗ್ಗೆ ಮಾಹಿತಿ ನೀಡುವ 'ಝಣ ಝಣ ಕಾಂಚಾಣ', ಪ್ರತೀ ಗುರುವಾರ ಮಹಿಳೆಯರಿಗಾಗಿ ವನಿತಾ ಧ್ವನಿ, ಕ್ರೀಡಾ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ 'ಆಟ-ನೋಟ' ಪ್ರಸಾರವಾಗುತ್ತಿದೆ.

ಮಕ್ಕಳಿಗೆ ಕಥೆ ಕೇಳಿಸುವ ಮತ್ತು ಅವರ ಮನ ಮುದಗೊಳಿಸುವ 'ಕಥೆ ಕೇಳು ಮಗುವೇ' ಪ್ರತೀ ಶುಕ್ರವಾರ ಮೂಡಿಬರುತ್ತಿದೆ. ಜೊತೆಗೆ ಸಿನಿಮಾ ರಂಗದ ಆಗುಹೋಗುಗಳ ವಿವರಣೆಯಿರುವ ಸಿನಿಮಾ ಮ್ಯಾಟನಿ ಶೋ ಪ್ರಸಾರವಾಗಲಿದ್ದರೆ, ಪ್ರತೀ ಶನಿವಾರ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ, ಚರ್ಚೆಯ ಹೂರಣ 'ಹರಟೆ ಕಟ್ಟೆ' ಪ್ರಸಾರವಾಗಲಿದೆ.

ಪ್ರಜಾವಾಣಿ ಡಿಜಿಟಲ್ ವಿಭಾಗದ ಕೊಡುಗೆಯಾಗಿರುವ ಈ ವಿಶೇಷಗಳನ್ನು Prajavani.net/podcast ವಿಭಾಗದಲ್ಲಿ ಯಾವುದೇ ಕ್ಷಣದಲ್ಲಿ ಕೇಳಬಹುದು.

ಇಷ್ಟಲ್ಲದೆ, ಆ್ಯಂಕರ್, ಆ್ಯಪಲ್ ಪಾಡ್‌ಕಾಸ್ಟ್, ಸ್ಪಾಟಿಫೈ, ಗೂಗಲ್ ಪಾಡ್‌ಕಾಸ್ಟ್, ರೇಡಿಯೋ ಪಬ್ಲಿಕ್, ಬ್ರೇಕರ್, ಓವರ್‌ಕಾಸ್ಟ್ ಹಾಗೂ ಪಾಕೆಟ್ ಕಾಸ್ಟ್ ವೇದಿಕೆಗಳಲ್ಲಿಯೂ ಅವುಗಳ ಜಾಲತಾಣಗಳು ಅಥವಾ ಆ್ಯಪ್‌ಗಳ ಮೂಲಕ ಪ್ರಜಾವಾಣಿಯ ಪಾಡ್‌ಕಾಸ್ಟ್ ಕನ್ನಡ ಧ್ವನಿಯನ್ನು ಆಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.