ADVERTISEMENT

ಕನ್ನಡ ಮಾತಿಗೆ ದಂಡ ಹಾಕುವ ಇಂಗ್ಲಿಷ್ ಶಾಲೆಗಳ ರದ್ದು ಮಾಡಿ: ಸಾಹಿತಿ ಸಿದ್ಧಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 15:04 IST
Last Updated 8 ಫೆಬ್ರುವರಿ 2020, 15:04 IST
ಸಾಹಿತಿ ಡಾ.‌ಸಿದ್ಧಲಿಂಗಯ್ಯ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪಂಪ ಪ್ರಶಸ್ತಿ ಪ್ರದಾನ ಮಾಡಿದರು
ಸಾಹಿತಿ ಡಾ.‌ಸಿದ್ಧಲಿಂಗಯ್ಯ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಪಂಪ ಪ್ರಶಸ್ತಿ ಪ್ರದಾನ ಮಾಡಿದರು   

ಬನವಾಸಿ (ಮಯೂರವರ್ಮ ವೇದಿಕೆ): ಕನ್ನಡ ಮಾತನಾಡಿದರೆ ದಂಡ ಹಾಕುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಸಾಹಿತಿ ಡಾ. ಸಿದ್ಧಲಿಂಗಯ್ಯ ಒತ್ತಾಯಿಸಿದರು.

ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಶನಿವಾರ ಸಂಜೆ ಉದ್ಘಾಟನೆಗೊಂಡ ಕದಂಬೋತ್ಸವ ವೇದಿಕೆಯಲ್ಲಿ ಪ‍್ರತಿಷ್ಥಿತ ಪಂಪ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಬೇಕು ಎಂದರು.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಘೋಷಣೆಯನ್ನು ರಾಜ್ಯ ಸರ್ಕಾರ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.

ADVERTISEMENT

ಕದಂಬೋತ್ಸವ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ’ರಾಜ್ಯದಲ್ಲಿ ಭ್ರಷ್ಠಾಚಾರ ನಿರ್ಮೂಲನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲಿ ಎಲ್ಲ ಹಿರಿಯ ಅಧಿಕಾರಿಗಳ ಸಭೆ ಕರೆದು ಎಚ್ಚರಿಕೆ ನೀಡಲಾಗುವುದು. ಆದರೂ, ಭ್ರಷ್ಟಾಚಾರ ನಡೆಸಿದರೆ ಶಾಶ್ವತವಾಗಿ ನೌಕರಿಯಿಂದ ಕಿತ್ತೊಗೆಯಲು ಕಾನೂನು ತಿದ್ದುಪಡಿ ಮಾಡಲು ಚಿಂತನೆ ನಡೆಸಲಾಗಿದೆ‘ ಎಂದರು.

ಭ್ರಷ್ಠಾಚಾರದ ಕಾರಣಕ್ಕೆ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ. ಹಣ ನೀಡಿದರೆ ಮಾತ್ರ ಕೆಲಸ ಎಂಬ ದೂರು ಹೆಚ್ಚಿದೆ. ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸೂಕ್ತ ಕ್ರಮ ನಿಶ್ಚಿತ. ಮಲೆನಾಡಿನ ಭಾಗದಲ್ಲಿ ಭೂ ಕುಸಿತ ತಡೆಯುವ ಸಂಬಂಧ ತಜ್ಞರ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವದ ಆಶಯದ ಕುರಿತು ಚರ್ಚೆ ನಡೆಯುತ್ತಿದೆ. ಜನಸಾಮಾನ್ಯರಲ್ಲಿರುವ ಶಕ್ತಿ ಗುರುತಿಸಿ ಗೌರವಿಸುವ ಕಾರ್ಯ ಬಿಜೆಪಿ ನಾಡಿನ ಉದ್ದಗಲಕ್ಕೂ ಮಾಡುತ್ತಿದೆ. ಜತೆಗೆ ಸಂವಿಧಾನ ಬರೆದವರ ಬಗ್ಗೆ ಗೌರವ ಹೊಂದಿದೆ ಹಾಗೂ ಅವರ ಪಂಚಧಾಮಗಳ ಅಭಿವೃದ್ಧಿ ಮಾಡುತ್ತಿದೆ. ಆದರೆ ಸಂವಿಧಾನದ ಕುರಿತು ಮಾತನಾಡುತ್ತಿರುವ ಪ್ರತಿಪಕ್ಷಗಳು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.